ಬೆಂಗಳೂರು : ಕಳೆದ ಹತ್ತು ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ತೆರೆದ ಚರಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದ ಆರು ವರ್ಷದ ಬಾಲಕನ ತಂದೆಗೆ 5 ಲಕ್ಷ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಸರ್ಕಾರಕ್ಕೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. ಪರಿಹಾರ ಧನ ಹೆಚ್ಚಳದ ಮನವಿ ವಿಳಂಬ ಮಾಡುತ್ತಿರುವ ಕ್ರಮ ಪ್ರಶ್ನಿಸಿ ಮೃತರ ತಂದೆ ರಾಜಪುರೋಹಿತ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿದೆ.
2013ರಿಂದ ಅರ್ಜಿದಾರರು ಮೂರನೇ ಬಾರಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹಾಗಾಗಿ ವಿಪತ್ತು ನಿರ್ವಹಣಾ ಕಾಯಿದೆಯಡಿ ಅವರಿಗೆ ನಿಗದಿಯಂತೆ 5 ಲಕ್ಷ ಪರಿಹಾರವನ್ನು 2013ರ ಅಕ್ಟೋಬರ್ 15ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.6ರಷ್ಟು ಬಡ್ಡಿ ಸಹಿತ ಆರು ವಾರಗಳಲ್ಲಿ ಪರಿಹಾರ ಪಾವತಿಸುವಂತೆ ಪೀಠ ಆದೇಶಿಸಿದೆ.
ಅಲ್ಲದೆ, ಆರು ವಾರಗಳಲ್ಲಿ ಮೃತ ಬಾಲಕನ ತಂದೆ ರಾಜಪುರೋಹಿತ್ ಅವರಿಗೆ ಪರಿಹಾರ ಧನ ತಲುಪದಿದ್ದರೆ ಶೇ. 12ರಷ್ಟು ಬಡ್ಡಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಒಂದು ವೇಳೆ ರಾಜ ಪುರೋಹಿತ್‌ಗೆ ಪರಿಹಾರ ಧನ ತಲುಪಿಸುವುದು ವಿಳಂಬ ಮಾಡಿದರೆ ದಂಡದ ಮೊತ್ತ 1 ಲಕ್ಷ ರೂ. ಗಳಿರುವುದು ಪ್ರತಿ ತಿಂಗಳಿಗೆ 50 ಸಾವಿರ ರೂಪಾಯಿಗಳಷ್ಟು ಹೆಚ್ಚಳವಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಅನಗತ್ಯ ವಿಳಂಬ ಮಾಡಿರುವ ತಪ್ಪಿತಸ್ಥ ಸಿಬ್ಬಂದಿಯಿಂದ ಬಡ್ಡಿ ಮತ್ತು ದಂಡದ ಮೊತ್ತವನ್ನು ವಸೂಲು ಮಾಡಲು ರಾಜ್ಯ ಸರ್ಕಾರ ಮುಕ್ತವಾಗಿರಲಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಮಗ ಅಥವಾ ಮಗಳ ಹಠಾತ್ ಸಾವು ಪೋಷಕರಿಗೆ ಭೀಕರವಾದ ಹೊಡೆತವಾಗಿದೆ ಎಂಬುದನ್ನು ಮರೆಯಲಾಗುವುದಿಲ್ಲ. ಮಗುವನ್ನು ಕಳೆದುಕೊಂಡು ಅರ್ಜಿದಾರರು ಜೀವನದ ಅತ್ಯಂತ ನೋವಿನ ಕ್ಷಣಗಳಲ್ಲಿರುವಾಗ ಅವರಿಗೆ ಮತ್ತಷ್ಟು ನೋವು ನೀಡುವುದು, ಅವರನ್ನು ಸರ್ಕಾರಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದು ಸರಿಯೇ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮಗುವಿನ ಹಠಾತ್ ನಿರ್ಗಮನದಿಂದ ಉಳಿದಿರುವ ಭಾವನಾತ್ಮಕ ನಿರ್ವಾತವನ್ನು ಪರಿಹಾರ ಧನದಿಂದ ತುಂಬಲು ಸಾಧ್ಯವಿಲ್ಲ. ಆದರೆ ಇನ್ನೂ, ಮಗುವಿನೊಂದಿಗೆ ಇದ್ದ ಬಾಂಧವ್ಯದ ಕಾರಣಕ್ಕೆ ಪೋಷಕರಿಗೆ ವಿತ್ತೀಯ ಪರಿಹಾರವನ್ನು ನೀಡಲಾಗುತ್ತದೆ. ಆದ್ದರಿಂದ, ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕು. ನಾಗರಿಕರ ಹಿತಾಸಕ್ತಿ ಕಾಪಾಡುವುದು ಮತ್ತು ಸುರಕ್ಷಿತವಾಗಿಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: 2013ರ ಜುಲೈ 15ರಂದು ಭಾರಿ ಮಳೆ ಬಿದ್ದ ವೇಳೆ ರಿತೇಶ್ ಸಿಂಗ್ ತೆರೆದ ಚರಂಡಿಯಲ್ಲಿ ಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ್ದ. ಅವರ ತಂದೆ ಕರಣ್ ಸಿಂಗ್ ಎಸ್. ರಾಜಪುರೋಹಿತ್ ಖಾಸಗಿ ಕಂಪನಿಯಲ್ಲಿ ಸೇಲ್ಸ್‌ಮನ್ ಆಗಿದ್ದರು. ಅವರು ನಗರಪಾಲಿಕೆ ವಿರುದ್ಧ ದೂರು ನೀಡಿದ್ದರು. ಆನಂತರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ವಿಪತ್ತು ನಿರ್ವಹಣಾ ಕಾಯಿದೆಯಡಿ 5 ಲಕ್ಷ ರೂ. ಮಾತ್ರ ಪರಿಹಾರ ನೀಡಲಾಗುವುದು ಎಂದು ಹೇಳಿದ್ದರು.
ಆದರೆ ,ಅರ್ಜಿದಾರರು ಹೆಚ್ಚಿನ ಪರಿಹಾರ ಕೋರಿ ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಸ್ಥಳೀಯ ಸಂಸ್ಥೆ ಅಕಾರಿಗಳು ಪರಿಗಣಿಸಿರಲಿಲ್ಲ. ಹಾಗಾಗಿ ಅವರು ಎರಡು ಬಾರಿ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಹೈಕೋರ್ಟ್ ಹೆಚ್ಚಿನ ಪರಿಹಾರ ಕೋರಿ ರಾಜಪುರೋಹಿತ್ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ನಿರ್ದೇಶನ ನೀಡಿತ್ತು. ಆದರೂ ಅವರ ಮನವಿ ಪರಿಗಣಿಸದೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ನಿರ್ಲಕ್ಷ್ಯ ಮತ್ತು ತಾತ್ಸಾರ ಧೋರಣೆ ತಳೆದಿತ್ತು. ಹಾಗಾಗಿ ಅವರು ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ : ಆರೋಪಿ ಖುಲಾಸೆಗೊಳಿಸಿದ್ದ ಆದೇಶ ಪ್ರಶ್ನಿಸಿ ಸಿಬಿಐ ಹೈಕೋರ್ಟ್ಗೆ ಅರ್ಜಿ