ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಮುಷ್ಕರ ನಿಗದಿಪಡಿಸಿರುವ ದಿನಾಂಕ ಮುಗಿದಿರುವುದರಿಂದ ಅರ್ಜಿ ವಿಚಾರಣೆಗೆ ಮಾನ್ಯತೆ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ಮುಷ್ಕರ ನಡೆಸದಂತೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಗೆ ನಿರ್ದೇಶಿಸುವಂತೆ ಕೋರಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿಗೆ ಗ್ರಾಮದ ಎಚ್ಎಂ ವೆಂಕಟೇಶ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಹಾಜರಾಗಿ, ಮುಷ್ಕರ ಸಂಬಂಧ ಸಾರಿಗೆ ನೌಕರರ ಸಂಘಗಳು ಮತ್ತು ಕಾರ್ಮಿಕ ಇಲಾಖೆಯೊಂದಿಗೆ ನಡೆದ ಎರಡನೇ ಸಂಧಾನ ಸಭೆ ವಿಫಲವಾಗಿದೆ.
ಈ ಸಂಬಂಧ ಇಂದು (ಗುರುವಾರ) ಮಧ್ಯಾಹ್ನ ಕಾರ್ಮಿಕ ಇಲಾಖೆ ಆಯುಕ್ತರು ತಿಳಿಸಿರುವುದಾಗಿ ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಸಭೆಯ ನಿರ್ಧಾರಗಳ ಕುರಿತ ವರದಿಯನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದ ನ್ಯಾಯಪೀಠ, ಅರ್ಜಿಯಲ್ಲಿ ವಿಚಾರಣೆಗೆ ಪರಿಗಣಿಸಬಹುದಾದ ಯಾವುದೇ ಅಂಶಗಳು ಉಳಿದಿಲ್ಲ ಎಂದು ಅಭಿಪ್ರಾಯಪಟ್ಟು ಪಿಐಎಲ್ ಇತ್ಯರ್ಥಪಡಿಸಿತು.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಪ್ರಕರಣದ ವಿವರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಮಾರ್ಚ್ 24 ರಂದು ಮುಷ್ಕರ ನಡೆಸಲು ಸಾರಿಗೆ ನಿಗಮಗಳ ನೌಕರರು ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ದ ಅರ್ಜಿದಾರರು, ಮುಷ್ಕರದಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡು ಸಾರ್ವಜನಿಕರು, ಉದ್ಯೋಗಿಗಳು, ವಿಶೇಷವಾಗಿ ಆರೋಗ್ಯ ಸಂಸ್ಥೆಗಳು ಹಾಗೂ ಔಷಧಾಲಯ ನೌಕರರಿಗೆ ತೀವ್ರ ಅನನುಕೂಲತೆ ಉಂಟಾಗಲಿದೆ. ಶಾಲೆಗಳ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಮುಷ್ಕರ ನಡೆದರೆ ವಿದ್ಯಾರ್ಥಿಗಳು ಶಾಲೆ ಹಾಗೂ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಕಷ್ಟವಾಗಲಿದೆ. ಆದ್ದರಿಂದ, ಮುಷ್ಕರ ನಡೆಸದಂತೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ಕೆಎಂಎಫ್ ನೇಮಕಾತಿಯಲ್ಲಿ ಅಕ್ರಮ: ಪಟ್ಟಿ ಪ್ರಕಟ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್
ಅರ್ಜಿಯನ್ನು ಮಾರ್ಚ್ 23 ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಮುಷ್ಕರದಿಂದ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಜತೆಗೆ, ಏಪ್ರಿಲ್ 6 ರಂದು ಕಾರ್ಮಿಕ ಇಲಾಖೆ ಆಯುಕ್ತರು 2ನೇ ಸುತ್ತಿನ ಸಂಧಾನ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ 3 ವಾರ ಕಾಲ ಮುಷ್ಕರ ನಡೆಸದಂತೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಸ್ವಾರ್ಥದ ಅಂಧಕಾರದಲ್ಲಿ ಸವದಿ, ಶೆಟ್ಟರ್ ಪಕ್ಷ ಬಿಟ್ಟು ಹೋಗಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ