ಬೆಂಗಳೂರು: ಅರಣ್ಯ ಪ್ರದೇಶದ ರಸ್ತೆ ಮೂಲಕ ಕಬ್ಬಿಣದ ಅದಿರು ಸಾಗಾಣೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ಮೆಸರ್ಸ್ ಠಾಕೂರ್ ಇಂಡಸ್ಟ್ರೀಸ್ ಸಲ್ಲಿಸಿದ್ದ ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಮನವಿಯನ್ನು ತಿರಸ್ಕರಿಸಿದೆ. ಖನಿಜ ಸಾಗಾಣೆಯಿಂದ ಆಗಬಹುದಾದ ಸಂಭವನೀಯ ಹಾನಿ ಅಥವಾ ನಷ್ಟ ತಪ್ಪಿಸುವುದೂ ಸಹ ಅರಣ್ಯ ಸಂರಕ್ಷಣೆಯ ಭಾಗವಾಗಿದೆ ಎಂದು ತಿಳಿಸಿದ ನ್ಯಾಯಪೀಠ, ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂಬ ಸರ್ಕಾರದ ಆದೇಶವನ್ನು ಎತ್ತಿ ಹಿಡಿಯಿತು.
ಅರಣ್ಯ ಪ್ರದೇಶದಲ್ಲಿ ತೆಗೆದ ಅದಿರು ಸಾಗಾಣೆಗೆ ಮಾತ್ರ ಅರಣ್ಯ ಇಲಾಖೆ ಅನುಮತಿ ಪಡೆಯಬೇಕಾಗುತ್ತದೆ. ಇದು ಬೇರೆಡೆ ತೆಗೆದಿರುವ ಅದಿರು ಆಗಿರುವುದರಿಂದ ಇಲಾಖೆ ಅನುಮತಿ ಅಗತ್ಯವಿಲ್ಲ ಎಂಬುದು ಅರ್ಜಿದಾರರ ವಾದವಾಗಿತ್ತು. ಈ ವಾದವನ್ನು ತಳ್ಳಿಹಾಕಿರುವ ನ್ಯಾಯಾಲಯ, ಕರ್ನಾಟಕ ಅಕ್ರಮ ಗಣಿಗಾರಿಕೆ, ಸಾಗಾಣೆ, ದಾಸ್ತಾನು ನಿಯಮ 2011ರ ನಿಯಮ 3 ಅನ್ನು ಉಲ್ಲೇಖಿಸಿ ಅನುಮತಿ ಅಗತ್ಯವಾಗಿ ಪಡೆಯಲೇಬೇಕು ಎಂದಿತು. ನಿಯಮದ ಉದ್ದೇಶ ಬೇರೆಯೇ ಇದೆ. ಇಂತಹ ನಿಯಮಗಳನ್ನು ಅನ್ವಯಿಸುವಾಗ ಅದನ್ನು ಯಾವ ಉದ್ದೇಶದಿಂದ ಮಾಡಿದ್ದಾರೆ ಎಂಬುದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಇಂತಹ ವಿಚಾರಗಳಲ್ಲಿ ಅರಣ್ಯದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ವ್ಯಾಖ್ಯಾನಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಪೀಠ ತಿಳಿಸಿದೆ.
ಈ ಹಿಂದೆ ನ್ಯಾಯಾಲಯದ ಮತ್ತೊಂದು ಪೀಠ ಅನುಮತಿ ನೀಡಿತ್ತು ಎಂಬ ವಾದವನ್ನು ನ್ಯಾಯಪೀಠ ಒಪ್ಪಿಲ್ಲ. ಆಗ ನಿಯಮದ ಬಗ್ಗೆ ನ್ಯಾಯಾಲಯದ ಗಮನ ಸೆಳೆದಿರಲಿಲ್ಲ. ಆದರೆ ಈಗ ನಿಯಮ ತಿಳಿದಿರುವುದರಿಂದ ಅನುಮತಿ ನೀಡಲಾಗದು. ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ. ಹಾಗಾಗಿ ವಜಾಗೊಳಿಸಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ನ್ಯಾಯಾಲಯದ ಆದೇಶ ಪಾಲಿಸದ ಸರ್ಕಾರ; 5 ಲಕ್ಷ ಠೇವಣಿ ಇಡುವಂತೆ ಹೈಕೋರ್ಟ್ ಆದೇಶ