ಬೆಂಗಳೂರು: ಕೋರ್ಟ್ ಮೂಲಕ ಪರಿಹಾರ ಕೋರಿ ಡಿಕ್ರಿ ಪಡೆದುಕೊಂಡಿರುವ ಕಕ್ಷೀದಾರರು ತಮ್ಮ ಹಣವನ್ನು ಪಡೆದುಕೊಳ್ಳಲು ಚೆಕ್ ನೀಡುತ್ತಿದ್ದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ಹೈಕೋರ್ಟ್ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಹಾಗೆಯೇ ನ್ಯಾಯಾಲಯಗಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.
ಮೋಟಾರು ವಾಹನ ಅಪಘಾತದಲ್ಲಿ, ಭೂಸ್ವಾಧೀನ ಪ್ರಕರಣಗಳಲ್ಲಿ ಹಾಗೂ ಕಾರ್ಮಿಕರ ಪರಿಹಾರ ಕಾಯ್ದೆ ಅಡಿ ಪರಿಹಾರ ಪಡೆಯುವ ಕಕ್ಷೀದಾರರಿಗೆ ಅನುಕೂಲವಾಗುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನಗಳನ್ನು ನೀಡಿದೆ. ಅದರಂತೆ ಆದೇಶ ಹೊರಡಿಸಿದ್ದು, ನ್ಯಾಯಾಂಗ ಖಾತೆಯ ಖಜಾನೆ-2 ರಲ್ಲಿ ಠೇವಣಿ ಇರಿಸಿರುವ ಪರಿಹಾರ ಹಣವನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಪ್ರಕ್ರಿಯೆಗಳನ್ನು ಪರಿಷ್ಕರಿಸುವ ಅಗತ್ಯವಿದೆ. ಜತೆಗೆ ಕಕ್ಷೀದಾರರಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ಹಣ ಬಿಡುಗಡೆಯಾಗುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕ ಸಿವಿಲ್ ಪ್ರಾಕ್ಚೀಸ್ ನಿಯಮಗಳ ಪ್ರಕಾರ 5 ಸಾವಿರಕ್ಕಿಂತ ಹೆಚ್ಚಿನ ಪರಿಹಾರ ಮೊತ್ತವನ್ನು ಕೋರ್ಟ್ ಚೆಕ್ ಮೂಲಕವೇ ಪಾವತಿಸಬೇಕು. ಆದರೆ, ಕೋವಿಡ್ -19 ನಿಂದಾಗಿ ತಾತ್ಕಾಲಿಕವಾಗಿ ಹಿಂದಿನ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಸಿವಿಲ್ ಕೋರ್ಟ್ ಡೆಪಾಸಿಟ್ ಮತ್ತು ಕ್ರಿಮಿನಲ್ ಕೋರ್ಟ್ ಡೆಪಾಸಿಟ್ ಹಣವನ್ನು ಇನ್ನು ಮುಂದೆ ಫಲಾನುಭವಿ ಕಕ್ಷೀದಾರರ ಖಾತೆಗೆ ಆನ್ ಲೈನ್ ಮೂಲಕವೇ ಪಾವತಿಸಲಾಗುತ್ತದೆ. ಚೆಕ್ ನೀಡಲು ಅವಕಾಶ ಇಲ್ಲವಾದ್ದರಿಂದ ಎಲ್ಲಾ ಪಾವತಿಗಳನ್ನು ಆನ್ಲೈನ್ ಮೂಲಕವೇ ಕಕ್ಷೀದಾರರ ಬ್ಯಾಂಕ್ ಖಾತೆಗೆ ಖಜಾನೆ-2ರಿಂದ ನೇರವಾಗಿ ವರ್ಗಾಯಿಸಲು ಸೂಚಿಸಿದೆ.
ಹೈಕೋರ್ಟ್ ನಿರ್ದೇಶನಗಳು- ಕಕ್ಷೀದಾರರು ಕೋರ್ಟ್ ಡಿಕ್ರಿ ಆದೇಶದ ಜತೆಗೆ ಪರಿಹಾರ ಹಣ ನೀಡಲು ಕೋರಿ ಅರ್ಜಿ ಸಲ್ಲಿಸಬೇಕು- ಅರ್ಜಿಯೊಂದಿಗೆ ಬ್ಯಾಂಕ್ ವಿವರಗಳನ್ನು ಫೋಟೋ ಸಹಿತ ಖಾತೆ ಪುಸ್ತಕದ ಜೊತೆ ಲಗತ್ತಿಸಬೇಕು. ಬ್ಯಾಂಕ್ ಖಾತೆ ಪುಸ್ತಕದಲ್ಲಿ ಫೋಟೋ ಇರದಿದ್ದಲ್ಲಿ ಬ್ಯಾಂಕ್ ಮ್ಯಾನೇಜರ್ ಸರ್ಟಿಫಿಕೇಟ್ ನೀಡಬೇಕು.- ಹಣ ಪಡೆಯುವವರ ಹೆಸರಲ್ಲೇ ಬ್ಯಾಂಕ್ ಖಾತೆ ಇರಬೇಕು. ಪಾನ್ ಕಾರ್ಡ್, ಸರ್ಕಾರ ನೀಡಿರುವ ಗುರುತಿನ ಚೀಟಿಯನ್ನು ಕಕ್ಷೀದಾರರು ಮತ್ತು ಅವರ ವಕೀಲರು ಸಹಿಯೊಂದಿಗೆ ದೃಢೀಕರಿಸಿರಬೇಕು.
ಫೋಟೋ ಸಹಿತ ಪ್ರಮಾಣ ಪತ್ರ ಹಾಗೂ ಬ್ಲಾಂಕ್ ವೋಚರ್ ನ್ನು ಕಕ್ಷೀದಾರ ಸಲ್ಲಿಸಬೇಕು- ಕಕ್ಷೀದಾರರ ದಾಖಲೆಗಳನ್ನು ದೃಢೀಕರಿಸುವ ವಕೀಲರು ಸಹಿಯೊಂದಿಗೆ ಬಾರ್ ನೀಡಿರುವ ಎನ್ರೋಲ್ಮೆಂಟ್ ನಂಬರ್ ವಿವರಗಳನ್ನು ನಮೂದಿಸಬೇಕು. ದಾಖಲೆಗಳನ್ನು ಪರಿಶೀಲಿಸಿದ ನಂತರ ಕೋರ್ಟ್ ಹಣ ಬಿಡುಗಡೆಗೆ ಆದೇಶಿಸಲಿದ್ದು, ಈ ವೇಳೆ ಕಕ್ಷೀದಾರರು ಖುದ್ದು ಹಾಜರಿರುವ ಅಗತ್ಯವಿಲ್ಲ. ಕೋರ್ಟ್ ಗೆ ಅನುಮಾನ ಬಂದಲ್ಲಿ ಮಾತ್ರ ವಿಡಿಯೋ ಕಾನ್ಪರೆನ್ಸ್ ಮೂಲಕ ಕಕ್ಷೀದಾರರನ್ನು ವಿಚಾರಣೆಗೆ ಒಳಪಡಿಸಬಹುದು. ಮತ್ತೂ ಅಗತ್ಯವಿದ್ದಲ್ಲಿ ಎಂಟ್ರಿ ಪಾಸ್ ನೀಡಿ ನೇರ ಹಾಜರಿಗೆ ಸೂಚಿಸಬಹುದು.
ಕೋರ್ಟ್ ಗೆ ದಾಖಲೆಗಳು ಸಮಾಧಾನ ತಂದ ಬಳಿಕವೇ ಖಜಾನೆ-2ರಿಂದ ಕಕ್ಷೀದಾರರ ಖಾತೆಗೆ ಹಣ ವರ್ಗಾಯಿಸಲು ಆದೇಶಿಸಬೇಕು.- ಕಕ್ಷೀದಾರನನ್ನು ವಕೀಲ ಪ್ರತಿನಿಧಿಸದೇ ಇದ್ದಲ್ಲಿ ಕಕ್ಷೀದಾರ ನೇರವಾಗಿ ಕೋರ್ಟ್ ಗೆ ಬರಲು ಅನುಮತಿಸಿ ನಂತರವೇ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.
ವೈವಾಹಿಕ ಪ್ರಕರಣಗಳಾಗಿದ್ದರೆ ಜೀವನಾಂಶ ಪಡೆಯುವರಿಗೆ, ನೀಡುವವರು ಆರ್.ಟಿ.ಜಿ.ಎಸ್ ಮೂಲಕವೇ ಪಾವತಿಸಲು ಕೋರ್ಟ್ ಗಳು ಸೂಚಿಸಬೇಕು. ಲಾಕ್ ಡೌನ್ ನಿಂದಾಗಿ ಮೂರು ತಿಂಗಳಿಂದ ಇಂತಹ ಪರಿಹಾರ ನೀಡುವಲ್ಲಿ ತಡವಾಗಿದ್ದರೆ ಕೋರ್ಟ್ ಗಳು ತಡ ಮಾಡದೇ ಶೀಘ್ರವಾಗಿ ಪ್ರಕ್ರಿಯೆ ಪೂರ್ಣಗೊಳಿಸಿ, ಹಣ ಬಿಡುಗಡೆಗೆ ಆದೇಶಿಸಬೇಕು.
ಖಜಾನೆ-2ರಿಂದ ಹಣ ಬಿಡುಗಡೆ ಮಾಡಲು ಸರ್ವರ್ ಸಮಸ್ಯೆ ಎದುರಾಗುತ್ತಿರುವುದು ಹಲವು ಬಾರಿ ವರದಿಯಾಗಿದ್ದು, ಈ ತಾಂತ್ರಿತ ಸಮಸ್ಯೆ ಬಗೆಹರಿಸಲು ಸರ್ಕಾರ ಕೂಡಲೇ ಕ್ರಮ ವಹಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.