ಬೆಂಗಳೂರು: ಕಾಣೆಯಾದ ತಂದೆ ಮತ್ತು ವಿದೇಶದಲ್ಲಿರುವ ತಾಯಿಯಿದ್ದು, ಗೊಂದಲ್ಲಿದ್ದ ಅಪ್ರಾಪ್ತ ಮಗುವಿನ ನೆರವಿಗೆ ಧಾವಿಸಿರುವ ಹೈಕೋರ್ಟ್ ಆ ಮಗುವಿಗೆ ಪಾಸ್‌ಪೋರ್ಟ್ ಒದಗಿಸುವಂತೆ ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ. ಅಪ್ರಾಪ್ತನ ತಂದೆ ನಾಪತ್ತೆಯಾಗಿದ್ದಾರೆ ಎಂಬ ಕಾರಣಕ್ಕೆ ಮಗುವಿಗೆ ಪಾಸ್ ಪೋರ್ಟ್ ನೀಡುವುದಕ್ಕೆ ನಿರಾಕರಿಸಿದ್ದ ಕ್ರಮ ಪ್ರಶ್ನಿಸಿ ಅಪ್ರಾಪ್ತ, ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಆ ಮಗುವಿಗೆ ಪಾಸ್‌ಪೋರ್ಟ್ ನೀಡುವಂತೆ ಈ ಸೂಚನೆ ನೀಡಿದೆ. ಅಲ್ಲದೆ, ಆ ಪಾಸ್ ಪೋರ್ಟ್ ಆ ಮಗು ಹದಿನೆಂಟು ವರ್ಷ ತುಂಬುವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ ಎಂದು ಕೂಡ ಆದೇಶಿಸಿದೆ.
ಭಾರತೀಯ ಸಂವಿಧಾನದ ಕಲಂ 226ರಡಿ ಕೋರ್ಟ್ ಮಧ್ಯಪ್ರವೇಶಕ್ಕೆ ಇದು ಸರಿಯಾದ ಪ್ರಕರಣವಾಗಿದೆ. ಆದರಿಂದ ಈ ಪ್ರಕರಣದಲ್ಲಿ ಮಗುವಿನದ್ದು ಏನೂ ತಪ್ಪಿಲ್ಲ. ಹಾಗಾಗಿ ನ್ಯಾಯಾಲಯ ಅದರ ನೆರವಿಗೆ ಧಾವಿಸುವುದು ಅತ್ಯಗತ್ಯವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಮಗುವಿಗೆ ಭಾರತೀಯ ಪಾಸ್ ಪೋರ್ಟ್ ನೀಡಲು ನಿರಾಕರಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಮುಖ್ಯ ಪಾಸ್ ಪೋರ್ಟ್ ಅಧಿಕಾರಿ 2022ರ ಜ.12 ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮಗು ಮತ್ತು ಅದರ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ಹಿನ್ನೆಲೆ ಏನು? : ಮಗುವಿನ ತಾಯಿ 2005ರಲ್ಲಿ ಸೆಲ್ವಕುಮಾರ್ ಬಾಲಸುಬ್ರಮಣ್ಯನ್ ಅವರನ್ನು ಮದುವೆಯಾಗಿದ್ದರು. 2008ರಲ್ಲಿ ಅವರಿಗೆ ಗಂಡು ಮಗು ಜನಿಸಿತ್ತು. ಬಳಿಕ 2011ರಲ್ಲಿ ಪತಿ ತಾನು ಕೆನಡಾದಲ್ಲಿ ನೆಲೆಸಲು ತೀರ್ಮಾನಿಸಿರುವುದನ್ನು ತನ್ನ ಪತ್ನಿಗೆ ತಿಳಿಸಿದರು. ನಂತರ ಜೊತೆಗೆ ಆತ ಪತ್ನಿ ಹಾಗೂ ಮಗುವನ್ನೂ ಸಹ ಕರೆದೊಯ್ದಿದ್ದರು. 2012ರಲ್ಲಿ ಬೆಂಗಳೂರಿಗೆ ವಾಪಸ್ ಬಂದ ಪತಿ, ಮಗುವನ್ನು ಪತಿಯ ತಂದೆ ತಾಯಿ ಬಳಿ ಬಿಟ್ಟು ನಾಪತ್ತೆಯಾದರು. ಅಲ್ಲಿಂದ ಇಲ್ಲಿಯವರೆಗೆ ಅವರು ಪತ್ತೆಯಾಗಿಲ್ಲ.
ಇನ್ನೂ ಮಗುವಿನ ತಾಯಿ ಕೆನಡಾದಲ್ಲಿ ತನ್ನ ಅಧ್ಯಯನ ಮುಂದುವರಿಸಿದರೆ, ಮಗು ಇತ್ತ ಅಜ್ಜಿ ತಾತನ ಬಳಿಯೇ ಇತ್ತು. 2015ರಲ್ಲಿ ತಾಯಿಗೆ ಕೆನಡಾದ ಪೌರತ್ವ ಹಾಗೂ ಪಾಸ್ ಪೋರ್ಟ್ ದೊರಕಿತು. ಆನಂತರ ತಾಯಿ ತನ್ನ ಭಾರತೀಯ ಪೌರತ್ವ ಮತ್ತು ಸಾಗೋತ್ತರ ಭಾರತೀಯ ಕಾರ್ಡ್ ವಾಪಸ್ ನೀಡಿದರು. ಇತ್ತ ಅಜ್ಜಿ ತಾತ ತನ್ನ ಮೊಮ್ಮಗುವಿಗೆ ಅಪ್ರಾಪ್ತರ ಪಾಸ್ ಪೋರ್ಟ್ ಕೋರಿ ಅರ್ಜಿ ಸಲ್ಲಿಸಿದ್ದರು. ಐದು ವರ್ಷಗಳ ಅವಧಿಗೆ ಪಾಸ್ ಪೋರ್ಟ್ ನೀಡಿತ್ತು. ಆದರೆ ಇತ್ತ ಪತಿ ಮನವಿ ಮೇರೆಗೆ ಕೋರ್ಟ್ ಏಕಪಕ್ಷೀಯ ವಿಚ್ಚೇದನ ಮಂಜೂರು ಮಾಡಿತ್ತು. ಮಗುವಿಗೆ ನೀಡಿದ್ದ ಪಾಸ್ ಪೋರ್ಟ್ ಅವಧಿಯಲ್ಲಿ 2020ರಲ್ಲಿ ಮುಗಿದಿತ್ತು. ಆನಂತರ ನವೀಕರಣ ಮಾಡಿರಲಿಲ್ಲ, ಅದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ಓದಿ :5 ಮತ್ತು 8ನೇ ತರಗತಿಗಳ ಬೋರ್ಡ್ ಪರೀಕ್ಷೆ ಮುಂದೂಡಲು ಮತ್ತೆ ನಿರಾಕರಿಸಿದ ಹೈಕೋರ್ಟ್