ಬೆಂಗಳೂರು: ಭೂ ಸುಧಾರಣಾ ಕಾಯ್ಧೆ ತಿದ್ದುಪಡಿ ಬಳಿಕ ಇತ್ಯರ್ಥಪಡಿಸಿರುವ 16 ಸಾವಿರಕ್ಕೂ ಅಧಿಕ ಪ್ರಕರಣಗಳು ಕಾಯ್ದೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ನ್ಯಾಯಾಲಯ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂಬ ಕುರಿತು ವ್ಯಾಪಕ ಪ್ರಚಾರ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಪರ ವಕೀಲರು ಪೀಠಕ್ಕೆ, ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರತಿಯನ್ನು ಸಲ್ಲಿಸಿದರು.
ಇದನ್ನು ಪರಿಶೀಲಿಸಿದ ಪೀಠ, ಅತಿ ಮಹತ್ವದ ಪ್ರಕರಣ ಕುರಿತು ಸುತ್ತೋಲೆಯಷ್ಟೇ ಸಾಲದು. ಅದನ್ನು ರಾಜ್ಯಪತ್ರದಲ್ಲಿ ಪ್ರಕಟಿಸಬೇಕು. ತಿದ್ದುಪಡಿ ಸುಗ್ರೀವಾಜ್ಞೆ ಆಧರಿಸಿ ಮೂಲ ಕಾಯ್ದೆ ಉಲ್ಲಂಘನೆ ಅಡಿ ದಾಖಲಾಗಿದ್ದ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ಸರ್ಕಾರದ ಕ್ರಮ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಡಲಿವೆ. ಹೀಗಾಗಿ, ರಾಜ್ಯ ಸರ್ಕಾರ ಈ ಕುರಿತು ರಾಜ್ಯಪತ್ರ ಹೊರಡಿಸುವುದರ ಜತೆಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮೇ.26ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ :
ಕಳೆದ ವರ್ಷ ಜುಲೈನಲ್ಲಿ ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿತ್ತು. ಮೂಲ ಶಾಸನದಲ್ಲಿದ್ದ ಸೆಕ್ಷನ್ 63ನ್ನು ತೆಗೆದು ಹಾಕಿತ್ತಲ್ಲದೇ, ಸೆಕ್ಷನ್ 78, 79 ಹಾಗೂ 80ಕ್ಕೆ ತಿದ್ದಪಡಿಗಳನ್ನು ತಂದಿತ್ತು. ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಜಮೀನು ಖರೀದಿ ಮಿತಿ ನಿರ್ಬಂಧದ ಸೆಕ್ಷನ್ 63ನ್ನು ಯಥಾವತ್ತಾಗಿ ಉಳಿಸಿಕೊಳ್ಳುವುದಾಗಿ ಹೇಳಿತ್ತು.
ಅಲ್ಲದೇ, ವಿವಿಧ ಹಂತದ ನ್ಯಾಯಾಲಯಗಳಲ್ಲಿ 1973ರ ಏಪ್ರಿಲ್ನಿಂದ ಬಾಕಿ ಉಳಿದಿರುವ ಭೂ ಸುಧಾರಣೆ ಕಾಯ್ದೆ ಉಲ್ಲಂಘನೆ ಪ್ರಕರಣಗಳೆಲ್ಲವೂ ಪೂರ್ವಾನ್ವಯವಾಗಿ ವಿಲೇವಾರಿಯಾಗುತ್ತವೆ ಎಂದಿತ್ತು. ಈ ವಿಚಾರವನ್ನು ಇಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್ ಗಮನಕ್ಕೆ ತಂದರು. ಹೇಳಿಕೆ ದಾಖಲಿಸಿಕೊಂಡ ಪೀಠ, ವಿಲೇವಾರಿಯಾದ ಪ್ರಕರಣಗಳೆಲ್ಲವೂ ತನ್ನ ಅಂತಿಮ ಆದೇಶದ ವ್ಯಾಪ್ತಿಗೆ ಒಳಪಟ್ಟಿರುತ್ತವೆ ಎಂದು ಪುನರುಚ್ಚರಿಸಿತಲ್ಲದೇ, ಈ ಸಂಬಂಧ ವ್ಯಾಪಕ ಪ್ರಚಾರ ಕೊಡುವಂತೆ ನಿರ್ದೇಶಿಸಿತು.
ಇದನ್ನೂ ಓದಿ: ತಿಪಟೂರಿನಲ್ಲಿ ಹಾಡ ಹಗಲೇ ಯುವಕನಿಗೆ ಮಚ್ಚಿನಿಂದ ಹಲ್ಲೆ -ವಿಡಿಯೋ