ಬೆಂಗಳೂರು: ನಗರದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ನ್ಯಾಯಾಲಯ ಕಾಲ-ಕಾಲಕ್ಕೆ ನೀಡಿರುವ ಆದೇಶಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಮುಂದಿನ ಎರಡು ವಾರಗಳಲ್ಲಿ ಪ್ರಮಾಣ ಪತ್ರ ಸಲ್ಲಿಸುವಂತೆ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಪಿಸಿಬಿ) ಸೂಚನೆ ನೀಡಿದೆ.
ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2022ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿಚಾರಣೆ ನಡೆಸಿದ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ಅಲ್ಲದೇ ನ್ಯಾಯಾಲಯದ ಈ ಹಿಂದಿನ ಆದೇಶದಂತೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕಾಲ-ಕಾಲಕ್ಕೆ ಕೋರ್ಟ್ ನೀಡಿರುವ ಆದೇಶಗಳನ್ನು ಪಾಲಿಸಿರುವ ಹಾಗೂ ಇನ್ನೂ ಪಾಲಿಸಬೇಕಾದ ಆದೇಶಗಳು ಮುಂದೆ ಅನುಸರಿಸಬಹುದಾದ ಮಾರ್ಗಗಳ ಬಗ್ಗೆ ಸಲಹೆ ಪಟ್ಟಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಲಾಗಿತ್ತು. ಜತೆಗೆ ಯಾರೆಲ್ಲ ಇನ್ನೂ ಸಲ್ಲಿಸಿಲ್ಲ ಅವರೂ ಸಹ ಎರಡು ವಾರಗಳಲ್ಲಿ ಪಟ್ಟಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿತು.
ಹಲವು ತಿಂಗಳ ಬಳಿಕ ಅರ್ಜಿ ವಿಚಾರಣೆಗೆ ಬಂದಿದೆ. ಬಿಬಿಎಂಪಿ ಪ್ರಮಾಣ ಪತ್ರ ಸಲ್ಲಿಸಿ ವರ್ಷ ಆಗಿದೆ. 2022ರ ಮಾ.17ರಂದು ಪ್ರಮಾಣಪತ್ರ ಸಲ್ಲಿಸಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ನ್ಯಾಯಾಲಯದ ಆದೇಶಗಳನ್ನು ಜಾರಿಗೆ ತರದೆ ಇರುವುದಕ್ಕೆ ಬೇಷರತ್ ಕ್ಷಮೆ ಯಾಚಿಸಿ, ಕೋರ್ಟ್ ಆದೇಶಗಳನ್ನು ಯಥಾವತ್ತಾಗಿ ಪಾಲಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದಾದ ನಂತರ ಬಿಬಿಎಂಪಿ ಹಾಗೂ ಸರ್ಕಾರ ಕೈಗೊಂಡಿರುವ ಕ್ರಮಗಳಲ್ಲಿ ಹೆಚ್ಚು ಪ್ರಗತಿ ಕಾಣುತ್ತಿಲ್ಲ. ಅಲ್ಲದೇ ಬಿಬಿಎಂಪಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅರ್ಜಿದಾರರಿಗೂ ಸಮಾಧಾನ ಇಲ್ಲ. ಆದ್ದರಿಂದ ಹೊಸದಾಗಿ ವಿವರವಾರದ ಪ್ರಮಾಣಪತ್ರ ಸಲ್ಲಿಸಲು ಬಿಬಿಎಂಪಿ, ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ: ರಾಜ್ಯದಲ್ಲಿ ಖಾಲಿಯಿರುವ ಸಿವಿಲ್ ನ್ಯಾಯಾಧೀಶರ ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ತುಂಬಲು 57 ಸಿವಿಲ್ ನ್ಯಾಯಾಧೀಶರ ನೇಮಕ ಮಾಡಿಕೊಳ್ಳಲು ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನವಾಗಿದೆ. ಕರ್ನಾಟಕ ನ್ಯಾಯಿಕ ಸೇವಾ (ನೇಮಕಾತಿ) ನಿಯಮ 2004, 2011, 2015 ಮತ್ತು 2016ರ ತಿದ್ದುಪಡಿ ನಿಯಮಗಳ ಅಡಿಯ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ನೋಂದಾಯಿತಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು. ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಮಾಡಿಸಿರಬೇಕು. ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಸೇರಿದವರಿಗೆ 38 ವಯೋಮಿತಿ, ಇತರೆ ಸಮುದಾಯಕ್ಕೆ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಾಜಿ ಸೈನಿಕ ಅಭ್ಯರ್ಥಿಗಳಾಗಿದ್ದರೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲಾಗಿದೆ.
ಹೈಕೋರ್ಟ್, ಜಿಲ್ಲಾ ನ್ಯಾಯಾಂಗದ ಸಿಬ್ಬಂದಿ, ಪ್ರಾಸಿಕ್ಯೂಷನ್ಸ್ ಮತ್ತು ಸರ್ಕಾರಿ ವ್ಯಾಜ್ಯ ನಿರ್ವಹಣೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಸರ್ಕಾರಿ ಪ್ರಾಸಿಕ್ಯೂಟರ್ ಹಾಗೂ ಹೆಚ್ಚುವರಿ ಸರ್ಕಾರಿ ವಕೀಲರಾಗಿ ಸೇವಾ ನಿರತ ಅಭ್ಯರ್ಥಿಗಳು ನೇಮಕಾತಿಗೆ ಪರಿಗಣಿಸಲಾಗುತ್ತಿದೆ. ಇವರು ನೋಂದಾಯಿತ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು. ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಸೇರಿದವರಿ 43 ವರ್ಷ ವಯೋಮಿತಿ, ಇತರೆ ಸಮುದಾಯಕ್ಕೆ 40 ವರ್ಷ ವಯೋಮಿತಿ ಮೀರಿರಬಾರದು ಎಂದು ಹೇಳಲಾಗಿದೆ.
ನೇರ ನೇಮಕಾತಿ: ಹೈಕೋರ್ಟ್ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (ಲಿಖಿತ ಮತ್ತು ಮೌಖಿಕ) ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗುತ್ತದೆ. ವೇತನ ಶ್ರೇಣಿಯು 27,700 ರೂಪಾಯಿಯಿಂದ 44,770 ರೂಪಾಯಿವರೆಗೆ ಇರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕುರಿತ ಅರ್ಜಿ: ಸ್ವಯಂ ಪ್ರೇರಿತ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿದ ಹೈಕೋರ್ಟ್