ಬೆಂಗಳೂರು/ಹುಬ್ಬಳ್ಳಿ: ರಾಜ್ಯದಲ್ಲಿ ಅಕಾಲಿಕ ಮಳೆ ಮುಂದುವರೆದಿದೆ. ಸೋಮವಾರ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆ ವ್ಯಾಪಕ ಮಳೆಯಾಗ್ತಿದೆ. ಇದರಿಂದಾಗಿ ಉಭಯ ನಗರಗಳಲ್ಲಿ ವಾಹನ ಸವಾರರು ಪರದಾಡುವಂತಾಯಿತು.
ಧಾರಾಕಾರ ಮಳೆಗೆ ವಾಹನ ಸವಾರರ ಪರದಾಟ: ಸಂಜೆ ಸಿಲಿಕಾನ್ ಸಿಟಿಯಲ್ಲಿ ವರುಣದ ಆರ್ಭಟಕ್ಕೆ ವಾಹನ ಸವಾರರು ತತ್ತರಿಸಿ ಹೋದರು. ಮೆಜೆಸ್ಟಿಕ್, ಮಲ್ಲೇಶ್ವರಂ, ಜಯನಗರ, ಶಿವಾಜಿನಗರ, ಯಶವಂತಪುರ, ಜಯನಗರ, ಜೆ ಪಿ ನಗರ ಸೇರಿದಂತೆ ಹೊಸೂರು, ಸರ್ಜಾಪುರ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಅರ್ಧಗಂಟೆಗೂ ಹೆಚ್ಚುಕಾಲ ಧಾರಾಕಾರ ಮಳೆಯಾಗಿದ್ದರಿಂದ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಹುಬ್ಬಳ್ಳಿಯಲ್ಲಿ ಮನೆಯೊಳಗೆ ನುಗ್ಗಿದ ನೀರು: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸಹ ಧಾರಾಕಾರ ಮಳೆಯಾಗಿದೆ. ನಾಲ್ಕು ಗಂಟೆಗಳ ಕಾಲ ಬಿಟ್ಟು ಬಿಡದೆ ಸುರಿದ ಮಳೆಗೆ ವಾಣಿಜ್ಯ ನಗರಿ ತತ್ತರಿಸಿದೆ. ನಗರದ ಬಹುತೇಕ ಸ್ಲಂಗಳು ಹಾಗೂ ತಗ್ಗು ಪ್ರದೇಶಗಳಲ್ಲಿನ ನಿವಾಸಿಗಳು ಕಂಗಾಲಾಗಿದ್ದಾರೆ. ಹಳೇ ಹುಬ್ಬಳ್ಳಿ, ದಾಜೀಬಾನ ಪೇಟೆ, ಕುಂಬಾರ ಓಣಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನೀರು ಹೊರಹಾಕಲು ಜನರು ಹರಸಾಹಸಪಟ್ಟರು. ನಗರದಲ್ಲಿ ವ್ಯಾಪಾರ ವಹಿವಾಟಿಗೂ ಮಳೆ ಅಡ್ಡಿಯನ್ನುಂಟು ಮಾಡಿದ್ರೆ, ವಾಹನ ಸವಾರರು ರಸ್ತೆ ಕಾಣದೆ ದಿಕ್ಕು ತೋಚದಂತಾಗಿದ್ದರು. ನಿರಂತರ ನಾಲ್ಕು ಗಂಟೆಗಳ ಕಾಲ ಮಳೆ ಸುರಿದ್ದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಮಳೆಗಾಲ ಮುಗಿದರೂ ಮಳೆಯ ಆರ್ಭಟ ಮಾತ್ರ ಇನ್ನೂ ನಿಂತಿಲ್ಲ. ಇನ್ನೂ ನಾಲ್ಕೈದು ದಿನ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಇನ್ನೊಂದು ವಾರ ರಾಜ್ಯದ ಅಲ್ಲಲ್ಲಿ ಮಳೆಕಾಟ ಇರಲಿದೆ. ಈ ಕುರಿತು ಜನರು ಜಾಗ್ರತೆ ವಹಿಸಬೇಕಿದೆ.
ಓದಿ: ಹಳ್ಳದಲ್ಲಿ ಸಿಲುಕಿಕೊಂಡ ಟ್ರ್ಯಾಕ್ಟರ್, ಕಾರ್ಮಿಕರು ಅಪಾಯದಿಂದ ಪಾರು