ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ವ್ಯಾಪ್ತಿಯ ಪ್ರದೇಶದಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ 238 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 265ಕ್ಕೂ ಹೆಚ್ಚು ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ವಿದ್ಯುತ್ ಪೂರೈಕೆಗೂ ಅಡಚಣೆಯಾಗಿದೆ.
ತುಮಕೂರು, ಕುಣಿಗಲ್, ನೆಲಮಂಗಲ ಹಾಗೂ ಚಿಕ್ಕಬಳ್ಳಾಪುರ ವಿಭಾಗಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿದವು. ಮರಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ತುಮಕೂರು, ತಿಪಟೂರು, ಕುಣಿಗಲ್, ನೆಲಮಂಗಲ, ಕನಕಪುರ, ಚಿಕ್ಕಬಳ್ಳಾಪುರ, ವಿಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಆದಷ್ಟು ಬೇಗ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆಸ್ಕಾಂ ಅಧಿಕಾರಿಗಳು ಹೇಳಿದರು.
ಇದನ್ನೂ ಓದಿ: ಶೆಟ್ಟರ್ ಮನೆ ಹತ್ತಿರ ಧರೆಗೆ ಉರುಳಿದ ಮರ: ಜೀಪ್ನಲ್ಲಿದ್ದ ಪೊಲೀಸ್ ಸಿಬ್ಬಂದಿ ಬಚಾವ್!
ನೆಲಮಂಗಲ ವಿಭಾಗದಲ್ಲಿ 35ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ. 3 ಟ್ರಾನ್ಸ್ಫಾರ್ಮರ್ಗಳಿಗೆ ತೊಂದರೆಯಾಗಿದೆ. ಬೆಸ್ಕಾಂ ಅಭಿಯಂತರರು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ನೆಲಮಂಗಲ, ಚುಂಚಘಟ್ಟ ಮುಖ್ಯರಸ್ತೆ ಹಾಗೂ ಕೋಣನಕುಂಟೆ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳ ಬದಲಾವಣೆ ಕಾರ್ಯ ನಡೆಯುತ್ತಿದೆ. ಕೋರಮಂಗಲದ ಕೇಂದ್ರೀಯ ಸದನ ಪ್ರದೇಶದಲ್ಲಿ ದೊಡ್ಡ ಮರವೊಂದು ಉರುಳಿದ್ದು, ತೆರವುಗೊಳಿಸಲಾಗಿದೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.