ಕೋವಿಡ್ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಕಾರ್ಯಕರ್ತರ ಸೇವೆ ಶ್ಲಾಘನೀಯ - bangalore latest news
ಕಳೆದ ವರ್ಷ ದೇಶಕ್ಕೆ ಲಗ್ಗೆಯಿಟ್ಟ ಕೊರೊನಾ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಅವರ ಸೇವೆ ಶ್ಲಾಘನಾರ್ಹವಾದ್ದು.
ಬೆಂಗಳೂರು: ಕೋವಿಡ್ ಎರಡನೇ ಅಲೆಯಲ್ಲಿ ಅತಿ ವೇಗವಾಗಿ ಸೋಂಕು ಹಬ್ಬಿಬಿಟ್ಟಿದೆ. ಇಂತಹ ಮಾರಕ ಕಾಯಿಲೆ ವಿರುದ್ಧ ಹೋರಾಡುತ್ತಿರುವುದು ಕೊರೊನಾ ವಾರಿಯರ್ಗಳು. ಸೋಂಕಿತರ ಮಧ್ಯೆಯೇ ಅತಿ ಹೆಚ್ಚು ಸಮಯ ಇದ್ದು, ಅವರ ಶುಶ್ರೂಷೆ ಮಾಡುವವರು ವೈದ್ಯರು, ನರ್ಸ್ಗಳು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ.
ಹೌದು, ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಸೋಂಕಿತರನ್ನು ಮುತುವರ್ಜಿಯಿಂದ ನೋಡಿಕೊಂಡು ಅವರನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತಾ ಬಂದಿದ್ದಾರೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಹೇಗೆ ಸೋಂಕಿನ ವಿರುದ್ಧ ಹೋರಾಡಿದರೋ ಅದೇ ರೀತಿ ಎರಡನೇ ಅಲೆಯಲ್ಲೂ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೆಚ್ಚು ಸಮಯ ಮಾಸ್ಕ್ ಹಾಕಿಕೊಳ್ಳಲು ಕಷ್ಟ ಪಡುವ ನಮ್ಮ ಮಧ್ಯೆ ನರ್ಸ್ಗಳು, ವೈದ್ಯರು ತಮಗೆ ಕಷ್ಟವಾಗುತ್ತಿದ್ದರೂ ದಿನವಿಡೀ ಫೇಸ್ ಮಾಸ್ಕ್, ಪಿಪಿಇ ಕಿಟ್ಗಳನ್ನು ಧರಿಸಿಕೊಂಡು ರೋಗಿಗಳ ಮುಖದಲ್ಲಿ ನಗು ಬರಿಸುವ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಅಂದಾಗ ಸ್ವಂತ ಮಕ್ಕಳು, ಸಂಬಂಧಿಕರು ಹತ್ತಿರಕ್ಕೂ ಬಾರದ ಇಂತಹ ಸಂದರ್ಭದಲ್ಲಿ ದಾದಿಯರು ಸದ್ದಿಲ್ಲದೆ ರೋಗಿಗಳು ಚೇತರಿಸಿಕೊಳ್ಳಲು ಸಹಾಯ ಮಾಡುತ್ತಾರೆ.
ಇಂತಹ ಕೊರೊನಾ ವಾರಿಯರ್ಸ್ಗಳ ಸೇವೆಗೆ ಕೊರೊನಾ ಸೋಂಕಿನಿಂದ ಗುಣಮುಖರಾದವರು ಸೆಲ್ಯೂಟ್ ಅಂತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಾಗರಿಕರೊಬ್ಬರು ಅಲ್ಲಿನ ವೈದ್ಯರ ಹಾಗೂ ನರ್ಸ್ಗಳ ಆರೈಕೆ, ಕಾಳಜಿಯಿಂದ ಗುಣಮುಖರಾಗಿದ್ದು ಕೈ ಮುಗಿದು ಧನ್ಯವಾದ ಅರ್ಪಿಸಿದ್ದಾರೆ.
85 ವರ್ಷ ವಯಸ್ಸಿನ ಪಿ.ವೆಂಕಟರಾವ್ ವೈದ್ಯರ, ನರ್ಸ್ಗಳ ಕಾಳಜಿಗೆ ಮನ ಸೋತಿದ್ದಾರೆ. ಮೊದಮೊದಲು ಒಣ ಕೆಮ್ಮು ಕಾಣಿಸಿಕೊಂಡಾಗ, ವೈದ್ಯರು ಕೋವಿಡ್ ಟೆಸ್ಟ್ ಮಾಡಿಸುವಂತೆ ಸಲಹೆ ನೀಡಿದ್ದರು. ಬಳಿಕ ವರದಿ ಪಾಸಿಟಿವ್ ಬಂದಿತ್ತು. ನಂತರ ವೈದ್ಯರ ಮಾಹಿತಿ ಮೇರೆಗೆ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊದಮೊದಲು ಆಕ್ಸಿಜನ್ ಸಹಾಯದಲ್ಲಿ ಇದ್ದ ವೆಂಟಕರಾವ್, ಇದೀಗ ವಾರಿಯರ್ಗಳ ಗುಣಮಟ್ಟದ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ನಾನು ಬಹುಬೇಗ ಗುಣವಾಗಲು ಅದ್ಭುತ ಕೊರೊನಾ ವಾರಿಯರ್ಸ್ ತಂಡವೇ ಕಾರಣವಾಯ್ತು. ಮೆಡಿಕಲ್ ಟ್ರೀಟ್ಮೆಂಟ್ ಬಗ್ಗೆ ಎರಡು ಮಾತಿಲ್ಲ. ಅವರ ಜೀವವನ್ನು ರಿಸ್ಕ್ನಲ್ಲಿ ಇಟ್ಟು ನಮ್ಮ ಜೀವ ಉಳಿಸುವ ಕೆಲಸ ಮಾಡ್ತಿದ್ದಾರೆ ಎಂದು ಭಾವುಕರಾದರು. ಕೊರೊನಾ ವಾರಿಯರ್ಸ್ಗೂ ಜೀವ, ಜೀವನ ಇದ್ದು, ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ ಅಂತ ಹೇಳಿ ಕೋವಿಡ್ ಟೀಂಗೆ ಸೆಲ್ಯೂಟ್ ಹೊಡೆದಿದ್ದಾರೆ.
ಇದನ್ನೂ ಓದಿ: ಕೋವಿಡ್ ಸಂಕಷ್ಟದಲ್ಲಿ ಕೆಲಸ ಮಾಡುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ: ಭಾಸ್ಕರ್ ರಾವ್
ಇತ್ತ, ಕೊರೊನಾ ಸೋಂಕು ಲೆಕ್ಕಿಸದೇ ಹೋರಾಡುತ್ತಿರುವ ವಾರಿಯರ್ಸ್ ಕೂಡ ಸೋಂಕು ತಡೆಗೆ ಸಹಕರಿಸಬೇಕೆಂದು ಜನರಿಗೆ ಮನವಿ ಮಾಡಿದ್ದಾರೆ. ಜ್ವರ, ಕೆಮ್ಮು, ನೆಗಡಿ ಸೇರಿದಂತೆ ರೋಗದ ಯಾವುದೇ ಲಕ್ಷಣಗಳು ಕಂಡು ಬಂದರೂ ಕೂಡಲೇ ಕೋವಿಡ್ ಟೆಸ್ಟ್ ಮಾಡಿಸುವಂತೆ ಮನವಿ ಮಾಡಿದ್ದಾರೆ. ಕೋವಿಡ್ ಬಗ್ಗೆ ನಿರ್ಲಕ್ಷ್ಯ ವಹಿಸಿ, ದಿನದೂಡಬೇಡಿ. ಆಕ್ಸಿಜನ್ ಬೆಡ್ ಸಿಕ್ಕಿಲ್ಲ ಅಂತಾ ಗೋಳಾಡುವುದರಿಂದ ತಪ್ಪಿಸಿಕೊಳ್ಳಿ ಅಂತಲೂ ಸಲಹೆ ನೀಡಿದ್ದಾರೆ. ಕೊರೊನಾ ದೊಡ್ಡ ರೋಗವಲ್ಲ. ಆದರೆ ಹಾಗೆಯೇ ಬಿಟ್ಟರೆ ಅದು ಇನ್ನೂ ದೊಡ್ಡ ಮಟ್ಟಕ್ಕೆ ಹೋಗುತ್ತದೆದೆ ಎಂದು ಎಚ್ಚರಿಸಿದರು.
ಕ್ರೂರಿ ಕೊರೊನಾದಂತಹ ಕಠಿಣ ಸಮಯದಲ್ಲೂ ಕುಟುಂಬದಿಂದ ದೂರ ಉಳಿದು, ಇತರರ ಆರೋಗ್ಯ ರಕ್ಷಣೆ ಮಾಡುವಲ್ಲಿ ನಿರತರಾಗಿರುವ ಆರೋಗ್ಯ ಕಾರ್ಯಕರ್ತರ ಸೇವೆ ಶ್ಲಾಘನೀಯ. ಆದ್ರೆ ಕೆಲ ಜನರ ನಿರ್ಲಕ್ಷ್ಯ ಮುಂದುವರೆದಿದ್ದು, ಕೋವಿಡ್ ಹಬ್ಬಲು ಕಾರಣರಾಗಿದ್ದಾರೆ. ಇದ್ರಿಂದ ಕೊರೊನಾ ವಾರಿಯರ್ಸ್ ಮೇಲಿರುವ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ಸೋಂಕು ನಿಂಯಂತ್ರಣಕ್ಕೆ ಸರ್ವರೂ ಸಹಕರಿಸಬೇಕಿದೆ.