ಬೆಂಗಳೂರು: ''ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ರಾಷ್ಟ್ರದ ಪ್ರಮುಖ ನಾಯಕರು. ನಮ್ಮ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ. ದೇವೇಗೌಡರನ್ನು ಇಂದು ಭೇಟಿ ಮಾಡಿದ್ದಾರೆ. ಇದು ಒಂದು ಸೌಹಾರ್ದಯುತ ಭೇಟಿಯಷ್ಟೇ. ಯಾವುದೇ ರೀತಿಯ ರಾಜಕೀಯ ಬೆಳವಣಿಗೆ ಬಗ್ಗೆ ಆಗಲಿ, ಮುಂದಿನ 2024ರ ಚುನಾವಣೆ ಬಗ್ಗೆ ಚರ್ಚೆಯಾಗಿಲ್ಲ'' ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಫಾರೂಕ್ ಅಬ್ದುಲ್ಲಾ ಅವರು ಭೇಟಿ ನೀಡಿ ತೆರಳಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ''ಫಾರೂಕ್ ಅಬ್ದುಲ್ಲಾ ಅವರು ಈ ದಿನ ದೇವೇಗೌಡರನ್ನು ಭೇಟಿಯಾಗಲು ಕಾರಣ, ಕಳೆದ ಕೆಲವು ದಿನಗಳ ಹಿಂದೆ ದೇವೇಗೌಡರ ಆರೋಗ್ಯ ಸಮಸ್ಯೆ ಇತ್ತು. ಆ ವಿಷಯ ಗೊತ್ತಾಗಿ ದೇವೇಗೌಡರನ್ನು ಭೇಟಿಯಾಗಲು ಬಂದಿದ್ದಾರೆ. ಇದೇ ಸಂದರ್ಭದಲ್ಲಿ ದೇವೇಗೌಡ್ರು ಪ್ರಧಾನಿಯಾದ ಸಂದರ್ಭದಲ್ಲಿ ಜಮ್ಮು ಕಾಶ್ಮೀರಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದಾರೆ. ನಿಮ್ಮಂತ ಪ್ರಧಾನಮಂತ್ರಿ ಈ ದೇಶದಲ್ಲಿ ಈಗ ಇದ್ದಿದ್ದರೆ, ಇವತ್ತು ಭಾರತ-ಪಾಕಿಸ್ತಾನದ ಸಮಸ್ಯೆಗಳಿಗೆ ಸಂಪೂರ್ಣವಾದ ತೆರೆ ಹೇಳುತ್ತಿದ್ರಿ. ಸೌಹಾರ್ದಯುತವಾಗಿ ಇಂಡಿಯಾ- ಪಾಕಿಸ್ತಾನ ಸಮಸ್ಯೆ ಬಗೆಹರಿಸಲು ಪ್ರಯತ್ನ ಪಟ್ಟಿದ್ರಿ. ಅದನ್ನು ಇವತ್ತು ಸಹ ನೆನಪಿಸಿಕೊಳ್ಳುತ್ತೇವೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರೆಂದರು.
ಪ್ರಧಾನಿಮಂತ್ರಿಗಳಾಗಿ ಓಪನ್ ಜೀಪ್ನಲ್ಲಿ ಸಂಚರಿಸಿ ಎರಡು ದೇಶಗಳಿಗೆ ನೀವು ಕೊಟ್ಟ ಸಂದೇಶ. ಇವತ್ತು ಸಹ ಮರೆಯಲು ಸಾಧ್ಯವಿಲ್ಲ. ಅವತ್ತಿನ ಹಲವಾರು ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ರು. ಜಮ್ಮು ಕಾಶ್ಮೀರ ಜನರಲ್ಲಿ ವಿಶ್ವಾಸ ಮೂಡಿಸಲು ಮತ್ತು ಪಾಕಿಸ್ತಾನದ ಅಲ್ಲಿಯ ಜನರಲ್ಲಿ ಹೊಂದಾಣಿಕೆ ಆಗಬೇಕು ಭಾವನೆ ಇದೆ. ಅದಕ್ಕೆ ನೀವು ಆಶಾಭಾವನೆ ಮೂಡಿಸಿದ್ರಿ ಅವತ್ತಿನ ದಿನಗಳ ಬಗ್ಗೆ ಸ್ಮರಿಸಿಕೊಳ್ಳುವ ಕೆಲಸ ಮಾಡಿದ್ರು. ಎಲ್ಲಾ ವಿಚಾರಗಳನ್ನು ಹೃದಯ ತುಂಬಿ ಮಾತನಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ನಾವೇನು ಕಾಂಗ್ರೆಸ್ ಜೊತೆ ಹೋಗೋಕೆ ಆಗುತ್ತಾ?: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲಾ ಪಕ್ಷಗಳು ಒಗ್ಗೂಡುವಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ನಾವೇನು ಕಾಂಗ್ರೆಸ್ ಜೊತೆ ಹೋಗೋಕೆ ಆಗುತ್ತಾ? ಈಗ ಕಾಂಗ್ರೆಸ್ನವರು ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಅವರ ಜೊತೆ ನಾವು ಮಾತನಾಡುವುದಕ್ಕೆ ಆಗುತ್ತಾ? ಜನ ಅವರನ್ನು ಇವಾಗ ಮೇಲೆ ಇಟ್ಟಿದ್ದಾರೆ. ಜನ ಅವರನ್ನು ಕೆಳಗೆ ಇಳಿಸಬೇಕಲ್ಲಾ? ನೋಡೋಣ ಬನ್ನಿ ಮುಂದೆ ಏನಾಗಲಿದೆ ಅಂತಾ ಎಂದು ಹೆಚ್ಡಿಕೆ ಮಾರ್ಮಿಕವಾಗಿ ನುಡಿದರು.
ಮತ ಪಡೆಯಲು ಇವೆಲ್ಲಾ ಅನಿವಾರ್ಯ- ಹೆಚ್ಡಿಕೆ: ಸಚಿವ ಚೆಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ ಅವರು, ಮತ ಪಡೆಯಲು ಇವೆಲ್ಲಾ ಅನಿವಾರ್ಯ ಅಂತಾ ಹೇಳಿದ್ದಾರೆ. ಇವೆಲ್ಲಾ ಸತ್ಯ ನಿಧಾನವಾಗಿ ಒಂದೊಂದೇ ಹೊರಬರ್ತಾ ಇದೆ. ಇನ್ನೂ ಯಾರ್ಯಾರು ಏನು ಮಾತನಾಡುತ್ತಾರೋ ಕಾದು ನೋಡೋಣ ಎಂದರು. ಕಾಂತರಾಜು ವರದಿ ಬಹಿರಂಗ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಸಿಎಂ ಸಿದ್ದರಾಮಯ್ಯ ಆ ವರದಿಯನ್ನು ಬಿಡುಗಡೆ ಮಾಡ್ತೀವಿ ಅಂದಿದ್ದಾರೆ. ಅದರಲ್ಲಿ ಯಾವ ಗುಮ್ಮ ಇದೆ ಅಂತ ನೋಡೋಣ. ವರದಿ ಬಹಿರಂಗಕ್ಕೆ ಸ್ವಾಗತ ಇದೆ ಎಂದರು.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಭೇಟಿಯಾದ ಕಾರ್ತಿ ಚಿದಂಬರಂ: ಸುದೀರ್ಘ ರಾಜಕೀಯ ಚರ್ಚೆ