ಬೆಂಗಳೂರು: ರಾಜ್ಯದಲ್ಲಿ ವನ್ಯಜೀವಿ- ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ 24/7 ರಂತೆ ಕಾರ್ಯಾಚರಣೆ ಮಾಡುವಂತಹ ಗ್ರೀವೆನ್ಸ್ ಸೆಲ್(ದೂರು ಕೋಶ) ಸ್ಥಾಪನೆ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವನ್ಯಜೀವಿ - ಮಾನವ ಸಂಘರ್ಷಕ್ಕೆ ತಡೆಯುವ ನಿಟ್ಟಿನಲ್ಲಿ ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವಂತೆ ಕೋರಿ ಕರ್ನಾಟಕ ಬೆಳಗಾರರ ಸಂಘ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ. ಜೆ. ಎಸ್ ಕಮಲ್ ಅವರಿದ್ದ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಈ ಸೂಚನೆ ನೀಡಿದೆ.
ಅಲ್ಲದೇ, ಜನರಿಂದ ಸಂಘರ್ಷದ ಕುರಿತು ಮಾಹಿತಿ ಪಡೆಯಲು ತಾಲೂಕು ಮಟ್ಟದಲ್ಲಿ ದೂರು ಕೋಶ(ಗ್ರೀವೆನ್ಸ್ ಸೆಲ್) ಪ್ರಾರಂಭಿಸಿ, ಅದಕ್ಕೆ ಅಗತ್ಯ ಇರುವ ಮಾನವ ಸಂಪನ್ಮೂಲ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಈ ಕಂಟ್ರೋಲ್ ರೂಂಗಳನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜಿಲಾಸ್ಪತ್ರೆಗಳಿಗೆ ತಕ್ಷಣ ಲಭ್ಯವಾಗುವಂತೆ ವ್ಯವಸ್ಥೆ ಮಾಡಿ ಸಂಘರ್ಷದಲ್ಲಿ ತೊಂದರೆಗೊಳಗಾಗುವವರಿಗೆ ತಕ್ಷಣ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಜತೆಗೆ, ಈ ದೂರು ಕೋಶದಲ್ಲಿನ ದೂರುಗಳನ್ನು ಮೇಲ್ವಿಚಾರಣೆ ಮಾಡುವುದಕ್ಕಾಗಿ ವಲಯ ಅರಣ್ಯ ಅಧಿಕಾರಿ ಮತ್ತು ತಹಶೀಲ್ದಾರ್ ಅವರು ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸಬೇಕು. ಈ ಸಂಬಂಧದ ವರದಿಯನ್ನು ಮೇಲಾಧಿಕಾರಿಗಳಿಗೆ ತಕ್ಷಣ ರವಾನಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೀಠ ತಿಳಿಸಿದೆ. ಸರ್ಕಾರ ರಚನೆ ಮಾಡಲಿರುವ ದೂರು ಕೋಶದ ಕುರಿತು ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಎಲ್ಲ ರೀತಿಯ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಬೇಕು. ಗ್ರಾಮ ಪಂಚಾಯತ್‌ಗಳ ನೋಟಿಸ್ ಬೋರ್ಡ್‌ನಲ್ಲಿ ಹಾಕಬೇಕು ಎಂದು ಪೀಠ ನಿರ್ದೇಶನ ನೀಡಿದೆ.
ಅಷ್ಟೇ ಅಲ್ಲದೆ, ರಾಜ್ಯದಲ್ಲಿ ವನ್ಯಜೀವಿ - ಮಾನವ ಸಂಘರ್ಷ ನಿಯಂತ್ರಿಸುವುದಕ್ಕಾಗಿ ರಾಜ್ಯ ಸರ್ಕಾರ ಆನೆಗಳಿಗೆ ಸುರಕ್ಷತಾ ವಾಸತಾಣದ ಕಾರಿಡಾರ್ ಮಾಡಬೇಕು. ವನ್ಯಜೀವಿ - ಮಾನವ ಸಂಘರ್ಷ ತಡೆಯಲಯ ರಾಜ್ಯ ಸರ್ಕಾರ ಅರಣ್ಯ ಇಲಾಖೆಗೆ ಅಗತ್ಯ ಮಾನವ ಸಂಪನ್ಮೂಲ, ವಾಹನ ಸೌಲಭ್ಯ ಸೇರಿದಂತೆ ಅಗತ್ಯ ಮೂಲಸೌಲಭ್ಯ ಒದಗಿಸಬೇಕು. ಸಂಘರ್ಷ ಕಂಡು ಬರುತ್ತಿದ್ದಂತೆ ಸ್ಥಳೀಯರಿಗೆ ಗುಂಪು ಸಂದೇಶ(ಬಲ್ಕ್ ಮೆಸೇಜ್)ಗಳನ್ನು ರವಾನೆ ಮಾಡುವ ತಂತ್ರಜ್ಞಾನ ಅಳವಡಿಸಿ ಎಚ್ಚರಗೊಳ್ಳುವಂತೆ ಮಾಡಬೇಕು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಅರಣ್ಯ ಪಡೆ ಮುಖ್ಯಸ್ಥರು ಮತ್ತು ವನ್ಯಜೀವಿ ಪರಿಪಾಲಕರು ವರ್ಷಕ್ಕೆ ನಾಲ್ಕು ಬಾರಿ ಮಾನವ- ವನ್ಯಜೀವಿ ಸಂಘರ್ಷಕ್ಕೆ ಸಂಬಂಧ ಸಭೆಗಳನ್ನು ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವನ್ಯಜೀವಿ-ಮಾನವ ಸಂಘರ್ಷದ ಮೇಲ್ವಿಚಾರಣೆ ನಡೆಸಬೇಕು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಪೀಠ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ: ಮಾನವ - ವನ್ಯಜೀವಿ ಸಂಘರ್ಷ ತಡೆಯಲು ಸರ್ಕಾರದಿಂದ ಯೋಜನೆ ಸಿದ್ಧ: ಸಿಎಂ ಬಸವರಾಜ ಬೊಮ್ಮಾಯಿ