ಬೆಂಗಳೂರು: ಆರ್ಥಿಕ ಸಂಕಷ್ಟದ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, 2021-22 ಸಾಲಿನ ಆಯವ್ಯಯ ಮಂಡಿಸಬೇಕಾಗಿದೆ. ಸೀಮಿತ ಆದಾಯದ ನಡುವೆ ಹೊಸ ಬಜೆಟ್ ಮಂಡನೆಗಾಗಿ ಈಗಾಗಲೇ ಹಣಕಾಸು ಇಲಾಖೆ ಪೂರ್ವಸಿದ್ಧತೆ ಪ್ರಾರಂಭಿಸಿದೆ.
2021-22 ಬಜೆಟ್ ಅತಿ ಸವಾಲಿನಿಂದ ಕೂಡಿದ ಬಜೆಟ್ ಆಗಿರಲಿದ್ದು, ಕಾರಣ ಆರ್ಥಿಕ ಸಂಕಷ್ಟ. ಕೊರೊನಾ ಪ್ರೇರಿತ ಲಾಕ್‌ಡೌನ್ ರಾಜ್ಯದ ಆರ್ಥಿಕತೆಗೆ ಕೊಡಲಿ ಏಟು ಬೀಳಿಸಿದೆ. ಎಲ್ಲಾ ಆದಾಯ ಮೂಲವನ್ನು ಬರಿದಾಗಿಸಿರುವುದರಿಂದ ಹಣ ಹೊಂದಿಸುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತೆರಿಗೆ ಸಂಗ್ರಹದಲ್ಲಿನ ಕೊರತೆ, ಸೀಮಿತ ಆದಾಯ ಮೂಲ ಸರ್ಕಾರದ ಕೈಯನ್ನು ಕಟ್ಟಿ ಹಾಕಿದೆ. ಹೀಗಾಗಿ 2021-22 ನೇ ಸಾಲಿನ ಆಯವ್ಯಯ ಸಿಎಂಗೆ ಕಬ್ಬಿಣದ ಕಡಲೆಯೇ ಸರಿ.
ಒಂದೆಡೆ ಜನಪ್ರಿಯ ಯೋಜನೆಗಳು ಕೊಡುವ ಅಗತ್ಯತೆಯೂ ಇದೆ, ಇನ್ನೊಂದೆಡೆ ಪ್ರಮುಖ ಇಲಾಖೆಗಳಿಗೆ ಅನುದಾನ ಕಡಿತಗೊಳಿಸುವ ಹಾಗಿಲ್ಲ. ಈ ಎಲ್ಲಾ ಅನಿವಾರ್ಯತೆಗಳ ಮಧ್ಯೆ ಯಾವ ರೀತಿ ಬಜೆಟ್ ಮಂಡಿಸಬೇಕು ಎಂಬುದೇ ಬಿಜೆಪಿ ಸರ್ಕಾರಕ್ಕೆ ಸವಾಲಿನ ಸಂಗತಿಯಾಗಿದೆ.
ಬಜೆಟ್ ತಯಾರಿ ಆರಂಭಿಸಿದ ಆರ್ಥಿಕ ಇಲಾಖೆ:
ತೀವ್ರ ಆರ್ಥಿಕ ಸಂಕಷ್ಟದ ಮಧ್ಯೆ ಆರ್ಥಿಕ ಇಲಾಖೆ 2021-22 ಸಾಲಿ ಬಜೆಟ್ ಮಂಡನೆಗಾಗಿ ಪೂರ್ವ ಸಿದ್ಧತೆಯನ್ನು ಪ್ರಾರಂಭಿಸಿದೆ. ಈಗಾಗಲೇ ಎಲ್ಲಾ ಇಲಾಖೆಗಳಿಗೆ ಅಂದಾಜು ಅನುದಾನ, ಖರ್ಚು ವೆಚ್ಚಗಳ ವಿವರಗಳ ಲೆಕ್ಕಾಚಾರ ನೀಡುವಂತೆ ನಿರ್ದೇಶನ ನೀಡಿದೆ. ಇಲಾಖಾ ಮುಖ್ಯಸ್ಥರುಗಳು ಈ ಅಂದಾಜುಗಳನ್ನು ಪರಿಶೀಲಿಸಿ ಕ್ರೋಢೀಕೃತ ಅಂದಾಜುಗಳನ್ನು ತಮ್ಮ ಷರಾದೊಂದಿಗೆ ಸಚಿವಾಲಯದ ಆಂತರಿಕ ಆರ್ಥಿಕ ಸಲಹೆಗಾರರುಗಳ ಮುಖಾಂತರ, ನಿಗದಿಪಡಿಸಿದ ದಿನಾಂಕಗಳಿಗಿಂತ ಮುಂಚಿತವಾಗಿ ಆರ್ಥಿಕ ಇಲಾಖೆಗೆ ಕಳುಹಿಸಿಕೊಡುವಂತೆ ಸುತ್ತೋಲೆ ಹೊರಡಿಸಿದೆ.
ಮಂಜೂರಾತಿಗಳು ಮತ್ತು ವಾಸ್ತವಿಕ ಅಗತ್ಯಗಳಿಗನುಗುಣವಾಗಿ ನಿಖರವಾಗಿ ಮತ್ತು ಎಚ್ಚರಿಕೆಯಿಂದ ಎಲ್ಲಾ ವೆಚ್ಚದ ಅಂದಾಜುಗಳನ್ನು ತಯಾರಿಸುವಂತೆ ತಿಳಿಸಲಾಗಿದೆ. ಸಹಾಯಧನಗಳು (ಇಂಧನ, ಆಹಾರ, ಹಾಲು, ಸಾರಿಗೆ), ನಿರ್ವಹಣೆ (ಕಟ್ಟಡಗಳು, ರಸ್ತೆಗಳು, ಸೇತುವೆಗಳು, ವಸತಿ ನಿಲಯಗಳು), ವಸತಿ ಶುಲ್ಕಗಳು (ವಸತಿ ನಿಲಯಗಳು), ಸಾಮಾಜಿಕ ಭದ್ರತೆ ಪಿಂಚಣಿ ಮುಂತಾದ ಎಲ್ಲಾ ತರಹದ ಬದ್ಧಿತ ವೆಚ್ಚಗಳಿಗಾಗಿ ಅವಕಾಶವನ್ನು ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.
ಮುಂಜಾಗ್ರತೆಯಿಂದ ವೆಚ್ಚ ಅಂದಾಜಿಸಲು ಸೂಚನೆ:
ಈ ಬಾರಿ ಆಯವ್ಯಯ ಅಂದಾಜುಗಳನ್ನು ಜಾಗರೂಕತೆಯಿಂದ, ಮುಂದಾಲೋಚನೆಯಿಂದ ತಯಾರಿಸುವಂತೆ ಆರ್ಥಿಕ ಇಲಾಖೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದೆ. ಯೋಜನಾ ಪ್ರಸ್ತಾವಗಳನ್ನು ಊಹಾತ್ಮಕ ಅಂದಾಜುಗಳ ಆಧಾರದ ಮೇಲೆ ಮಾಡದೇ, ಸಂಭಾವ್ಯ ಮತ್ತು ವಾಸ್ತವಿಕ ಅಗತ್ಯತೆಗಳ ಆಧಾರದ ಮೇಲೆ ತಯಾರಿಸುವಂತೆ ನಿರ್ದೇಶನ ನೀಡಾಗಿದೆ. ಪೂರಕ ಅಂದಾಜುಗಳಲ್ಲಿ ಹೆಚ್ಚುವರಿ ಅನುದಾನ ಒದಗಿಸುವುದನ್ನು ಮತ್ತು ಮರುವಿನಿಯೋಗವನ್ನು ತಪ್ಪಿಸುವುದಕ್ಕಾಗಿ ಆಯವ್ಯಯದಲ್ಲಿ ಅನೇಕ ಉದ್ದೇಶಿತ ಶೀರ್ಷಿಕೆಗಳನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಆಯವ್ಯಯ ಅಂದಾಜು ತಯಾರಿಸುವ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾರ್ಯ ಯೋಜನೆಗಳನ್ನು ಪುನರಾವಲೋಕಿಸಬೇಕೆಂದು ಸೂಚಿಸಿದೆ.
ಒಂದೇ ತೆರನಾದ ಉದ್ದೇಶಗಳನ್ನು ಹೊಂದಿರುವ ಯೋಜನೆಗಳನ್ನು ವಿಲೀನಗೊಳಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ನಿಖರ ವೆಚ್ಚ ಅಂದಾಜು ನೀಡುವಂತೆ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ಸಾಮಾನ್ಯವಾಗಿ 5 ಕೋಟಿ ರೂ.ಗಳಿಗಿಂತ ಕಡಿಮೆ ಮೊತ್ತವನ್ನೊಳಗೊಂಡಿರುವ ಅಂಶಗಳನ್ನು 2021-22ನೇ ಸಾಲಿನ ಆಯವ್ಯಯ ಅಂದಾಜುಗಳಲ್ಲಿ ಸೇರಿಸಲಾಗುವುದಿಲ್ಲ ಎಂದು ಆರ್ಥಿಕ ಇಲಾಖೆ ತಿಳಿಸಿದೆ.
ಸದ್ಯದ ಆರ್ಥಿಕ ಸ್ಥಿತಿಗತಿ ಹೇಗಿದೆ..?
ಲಾಕ್‌ಡೌನ್ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿದ್ದು, ಹಿಂದೆಂದೂ ಕಂಡರಿಯದಷ್ಟು ಆದಾಯ ಖೋತಾ ಎದುರಿಸುತ್ತಿದೆ. ಅದಕ್ಕಾಗಿಯೇ ಸರ್ಕಾರ ಈ ಬಾರಿ 33,000 ಕೋಟಿ ರೂ. ಸಾಲ ಎತ್ತುವಳಿ ಮಾಡಲು ನಿರ್ಧರಿಸಿದೆ. ಪ್ರಸಕ್ತ ವರ್ಷದಲ್ಲಿ 2.37 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯವನ್ನು ಮಂಡಿಸಿದ್ದು 1,79,920 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಲಾಕ್ಡೌನ್ನಿಂದಾಗಿ ತೆರಿಗೆ ಮತ್ತಿತರ ಆದಾಯ 1.14 ಲಕ್ಷ ಕೋಟಿ ರೂ.ಗೆ ಕುಸಿಯುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ 65,920 ಕೋಟಿ ರು. ಹಣದ ಕೊರತೆ ಎದುರಾಗಲಿದೆ.
ಸೆಪ್ಟೆಂಬರ್ ವರೆಗಿನ ತೆರಿಗೆ ಸಂಗ್ರಹದಲ್ಲಿ ಚೇತರಿಕೆ ಕಾಣುತ್ತಿದ್ದರೂ, ಕಳೆದ ಬಾರಿಗೆ ಹೋಲಿಸಿದರೆ ಭಾರೀ ಆದಾಯ ಖೋತಾ ಕಂಡಿದೆ. ಆರ್ಥಿಕ ಇಲಾಖೆ ನೀಡಿರುವ ಅಂಕಿ ಅಂಶ ಪ್ರಕಾರ ಸೆಪ್ಟೆಂಬರ್ ವರೆಗರ ವಾಣಿಜ್ಯ ತೆರಿಗೆ ರೂಪದಲ್ಲಿ 23,164 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ 22.23% ಪ್ರಗತಿ ಕುಸಿತವಾಗಿದೆ. ಇನ್ನು 9,766 ಕೋಟಿ ಅಬಕಾರಿ ತೆರಿಗೆ ಸಂಗ್ರಹವಾಗಿದ್ದು, 10.25% ಪ್ರಗತಿ ಕುಂಠಿತವಾಗಿದೆ. ಮೋಟಾರು ವಾಹನ ತೆರಿಗೆ 1,840 ಕೋಟಿ ರೂ. ಸಂಗ್ರಹವಾಗಿದ್ದು, 38.58% ಪ್ರಗತಿ ಕುಸಿತವಾಗಿದೆ. ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಮೂಲಕ ಸೆಪ್ಟೆಂಬರ್ವರೆಗೆ 3,681 ಕೋಟಿ ರೂ. ಸಂಗ್ರಹಿಸಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ 32.85% ಪ್ರಗತಿ ಕುಂಠಿತವಾಗಿದೆ.
ಆರ್ಥಿಕ ತಜ್ಞರು ಹೇಳುವುದೇನು..?
ಲಾಕ್ಡೌನ್ನಿಂದ ಈ ಬಾರಿ ಸರ್ಕಾರ ಆರ್ಥಿಕ ಅಭಾವ ಎದುರಿಸುತ್ತಿದೆ. ಕೊರೊನಾ ಎಫೆಕ್ಟ್ನಿಂದ ಹೊರ ಬರಲು ಇನ್ನೂ ಸುಮಾರು ಆರು ತಿಂಗಳಿಂದ ಒಂದು ವರ್ಷ ಬೇಕಾಗಬಹುದು. ಹೀಗಾಗಿ ಸರ್ಕಾರ ಹಿತಮಿತದೊಳಗೆ ಈ ಬಜೆಟ್ ಮಂಡಿಸುವ ಅನಿವಾರ್ಯತೆ ಇದೆ ಎಂದು ಆರ್ಥಿಕ ತಜ್ಞ ಸಿ.ಎ. ರುದ್ರಮೂರ್ತಿ ತಿಳಿಸಿದ್ದಾರೆ. ವೆಚ್ಚ ಕಡಿತದ ಜೊತೆಗೆ ಮೂಲಭೂತ ಸೌಕರ್ಯ ಸೇರಿ ಆದ್ಯತಾ ವಲಯಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಆದಾಯ ಕೊರತೆಯ ಹಿನ್ನೆಲೆ ಪರ್ಯಾಯ ಮಾರ್ಗಗಳ ಮೂಲಕ ಆದಾಯ ಕ್ರೋಢೀಕರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಕೋವಿಡ್ ಹಿನ್ನೆಲೆ ಈ ಬಾರಿ ಬಜೆಟ್ನಲ್ಲಿ ಸರ್ಕಾರ ತೆರಿಗೆ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಹೆಚ್ಚುವರಿ ಹೊರೆ ಹೊರುವ ಸಾಮರ್ಥ್ಯ ಜನರಲ್ಲಿ ಇಲ್ಲ. ಹೀಗಾಗಿ ಸರ್ಕಾರ ವೆಚ್ಚ ಕಡತದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ನೌಕರರ ವೇತನ ಕಡಿತ ಸೇರಿ ಇತರ ಪರ್ಯಾಯ ಮಾರ್ಗಗಳ ಮೂಲಕ ವೆಚ್ಚ ಕಡಿತಗೊಳಿಸುವ ಅಗತ್ಯ ಇದೆ ಎಂದು ಆರ್ಥಿಕ ತಜ್ಞ ಎನ್. ನಿತ್ಯಾನಂದ ತಿಳಿಸಿದ್ದಾರೆ.