ಬೆಂಗಳೂರು: ವಾಲ್ಮೀಕಿ ಸಮಾಜಕ್ಕೆ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಶೇ. 7.5 ಮೀಸಲಾತಿ ಒದಗಿಸುವ ಬೇಡಿಕೆಯನ್ನು ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ ಹಿನ್ನೆಲೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳ ಉಪವಾಸ ಸತ್ಯಾಗ್ರಹ ಸುಖಾಂತ್ಯಗೊಂಡಿದೆ.
ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯ ಶೀಘ್ರ ಜಾರಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶೇ. 7.5ರಷ್ಟು ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಸರ್ಕಾರದ ಸ್ಪಷ್ಟ ಭರವಸೆ ಹಿನ್ನೆಲೆಯಲ್ಲಿ ಪಾನೀಯ ಸೇವಿಸುವ ಮೂಲಕ ಅಂತ್ಯಗೊಳಿಸಿದರು.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮತ್ತು ಇತರೆ ಜನಪ್ರತಿನಿಧಿಗಳ ಸತತ ಪರಿಶ್ರಮದಿಂದ ಸ್ವಾಮೀಜಿಯವರ ಧರಣಿ ಸತ್ಯಾಗ್ರಹ ಮುಕ್ತಾಯಗೊಂಡಿದೆ. ನ್ಯಾ. ನಾಗ ಮೋಹನ್ದಾಸ್ ಆಯೋಗದ ವರದಿಯ ಶೀಘ್ರ ಜಾರಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶೇ. 7.5ರಷ್ಟು ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಪ.ಪಂ ಸಮುದಾಯದ ಜನಪ್ರತಿನಿಧಿಗಳು ಸಭೆ ಸೇರಿ ಚರ್ಚಿಸಿದ್ದು, ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿದ್ದು, ಇದಕ್ಕೆ ಸಿಎಂ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ.
ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿರುವ ಹಿನ್ನೆಲೆ ಶ್ರೀಗಳು ಧರಣಿ ನಿಲ್ಲಿಸಲು ಸಮ್ಮತಿಸಿದರು.