ಬೆಂಗಳೂರು : ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನ ಮಾಜಿ ಸಿಇಒ ವಾಸುದೇವಮಯ್ಯ ಆತ್ಮಹತ್ಯೆ ಬೆನ್ನಲೇ, ಬ್ಯಾಂಕ್ ಸದಸ್ಯರ ವಿರುದ್ಧ ಬಹುಕೋಟಿ ವಂಚನೆ ಆರೋಪ ಸಂಬಂಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರಪುರದಲ್ಲಿರುವ ಗುರುಸೌರ್ವಭೌಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇರಿಸಲಾಗಿದ್ದ 233 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಡಿ ಗುರುಸೌರ್ವಭೌಮ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷ ಸತ್ಯನಾರಾಯಣ, ಸದಸ್ಯ ವಾಸುದೇವಮಯ್ಯ ಸೇರಿ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಒಟ್ಟು 14 ಮಂದಿ ವಿರುದ್ಧ ಬ್ಯಾಂಕ್ ವಿಶೇಷ ಅಧಿಕಾರಿ ಸಂಜಯ್ ಕಲಾಸ್ಕರ್ ನೀಡಿದ ದೂರಿನ ಆಧಾರದ ಮೇಲೆ ಶಂಕರಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುರುರಾಘವೇಂದ್ರ ಬ್ಯಾಂಕ್ ಬಹುಕೋಟಿ ಅವ್ಯವಹಾರ ಪ್ರಕರಣದಲ್ಲಿ ಆರೋಪಿಗಳಾಗಿದ್ದ ರಾಮಕೃಷ್ಣ ಹಾಗೂ ವಾಸುದೇವಮಯ್ಯ ಅವರು ಕಳೆದ ವರ್ಷ ಗುರುಸೌರ್ವಭೌಮ ಬ್ಯಾಂಕ್‌ನ ಆಡಳಿತ ಮಂಡಳಿ ಸಕ್ರಿಯ ಸದ್ಯಸರಾಗಿದ್ದರು. ಇವರ ಆಡಳಿತ ಅವಧಿಯಲ್ಲಿ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಗ್ರಾಹಕರನ್ನು ಸೆಳೆದು ಬ್ಯಾಂಕಿನಲ್ಲಿ ಹಣ ಹೂಡುವಂತೆ ಮಾಡುತ್ತಿದ್ದರು. ಇದೇ ರೀತಿಯಿಂದ ಬಂದ 90 ಕೋಟಿ ರೂಪಾಯಿ ಹಣವನ್ನು ಬಸವನಗುಡಿಯ ನೆಟ್ಟಕಲ್ಲಪ್ಪ ರಸ್ತೆಯಲ್ಲಿರುವ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮಾಡಿದ ಸಾಲಗಳಿಗೆ ವಜಾ ಮಾಡಿಕೊಳ್ಳಲು ಅಕ್ರಮವಾಗಿ ಹಣ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಗೆ ದಾಖಲಾತಿ ತೋರಿಸದೆ ಬ್ಯಾಂಕ್ ಆಡಿಟ್ ವೇಳೆ ಕೇವಲ 20 ಕೋಟಿ ಸಾಲ ನೀಡಿರುವುದಾಗಿ ದಾಖಲಾತಿ ಸಲ್ಲಿಸಿದೆ.
ಈ ಮೂಲಕ ನೂರಾರು ಕೋಟಿ ಅವ್ಯವಹಾರ ನಡೆಸುವುದಲ್ಲದೆ ಗ್ರಾಹಕರ ಠೇವಣಿ ಹಣ ವಾಪಸ್ ನೀಡಿರಲಿಲ್ಲ ಎಂದು ಆಡಿಟ್ ವರದಿಯಲ್ಲಿ ಬಹಿರಂಗವಾಗಿದೆ. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳ ವಿರುದ್ಧ ನಂಬಿಕೆ ದ್ರೋಹ, ವಂಚನೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ಸೋಮವಾರ ರಾತ್ರಿ ಉತ್ತರ ಹಳ್ಳಿ ಬಳಿಯ ಕಾರಿನಲ್ಲಿ ವಿಷ ಸೇವಿಸಿ ವಾಸುದೇವಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು.
ಗುರುರಾಘವೇಂದ್ರ ಬ್ಯಾಂಕ್ ಸಿಇಒ ಆಗಿದ್ದ ಅವಧಿಯಲ್ಲಿ ಗ್ರಾಹಕರ ಸಾವಿರಾರು ಕೋಟಿ ಠೇವಣಿ ಹಣವನ್ನು ಅಕ್ರಮ ವರ್ಗಾವಣೆ ಮಾಡಿರುವುದು ಎಸಿಬಿ ದಾಳಿಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ವಾಸುದೇವಮಯ್ಯ, ಬ್ಯಾಂಕ್ ಮಾಜಿ ಅಧ್ಯಕ್ಷ ರಾಮಕೃಷ್ಣ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರ ಮೇಲೆ ಎಸಿಬಿ ಎಫ್ಐಆರ್ ದಾಖಲಿಸಿಕೊಂಡಿದ್ದರು. ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಸದ್ಯ ಒಟ್ಟು 14 ಮಂದಿ ವಿರುದ್ಧ ಬ್ಯಾಂಕ್ ವಿಶೇಷ ಅಧಿಕಾರಿ ಸಂಜಯ್ ಕಲಾಸ್ಕರ್ ನೀಡಿದ ದೂರಿನ ಆಧಾರದ ಮೇಲೆ ಶಂಕರಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.