ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಹಾಗು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಸಿಬ್ಬಂದಿ ಗೌರವ ಧನವನ್ನು ಹೆಚ್ಚಿಸಬೇಕು, ಪ್ರಸಕ್ತ ಸಾಲಿನ ಆಯವ್ಯಯದಲ್ಲಿಯೇ ಅದನ್ನು ಸೇರಿಸಬೇಕು ಎಂದು ಪಕ್ಷಾತೀತವಾಗಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಸರ್ಕಾರಿ ನಿವಾಸ ರೇಸ್ ವ್ಯೂ ಕಾಟೇಜ್ಗೆ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಸಂಸ್ಥೆಗಳಿಂದ ಜಯಗಳಿಸಿದ ಅಭ್ಯರ್ಥಿಗಳು ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದರು.
ಬೇರೆ ರಾಜ್ಯಗಳ ಉದಾಹರಣೆ: ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗೆ ಇರುವ ಗೌರವಧನ, ಉಚಿತ ಬಸ್ ಪಾಸ್, ಪ್ರವಾಸ ಭತ್ಯೆಗಳು, ವಾಹನ ಸೌಕರ್ಯ ಸೇರಿದಂತೆ ಕಲ್ಪಿಸಲಾಗಿರುವ ಎಲ್ಲ ಸವಲತ್ತುಗಳ ಕುರಿತು ಸಿಎಂಗೆ ಮಾಹಿತಿ ನೀಡಲಾಯಿತು. ಇಷ್ಟೆಲ್ಲಾ ಸವಲತ್ತು ಕೇಳುತ್ತಿಲ್ಲ, ನಮ್ಮ ಪಂಚಾಯತ್ ಸದಸ್ಯರು ಗೌರವಧನ ಹೆಚ್ಚಳದ ಬೇಡಿಕೆ ಇರಿಸಿದ್ದಾರೆ, ದಿನ ಬೆಳಗಾದರೆ ನಾವು ಅವರ ಜೊತೆ ಕೆಲಸ ಮಾಡಬೇಕು, ಅವರ ಒಂದು ಬೇಡಿಕೆ ಈಡೇರಿಸದೇ ಇದ್ದಲ್ಲಿ ನಾವು ಅವರ ಮುಂದೆ ನಿಲ್ಲುವುದು ಹೇಗೆ? ಅಲ್ಲದೆ ನ್ಯಾಯಸಮ್ಮತ ಬೇಡಿಕೆ ಕಡೆಗಣಿಸುವುದು ಸರಿಯಲ್ಲ ಎಂದು ಗೌರವಧನ ಹೆಚ್ಚಳದ ಅಗತ್ಯತೆಯನ್ನು ಸಿಎಂಗೆ ಮನವರಿಕೆ ಮಾಡಿಕೊಡಲಾಯಿತು.
ಇದನ್ನೂ ಓದಿ: ಬಿಜೆಪಿ ಭದ್ರಕೋಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಯೋಗಿ ಆದಿತ್ಯನಾಥ್‌ಗೆ ಗೆಲುವು
ಈ ವೇಳೆ ಜೆಡಿಎಸ್ ಸದಸ್ಯ ಮಂಜೇಗೌಡ ಮಾತನಾಡಿ, ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ಹೆಚ್ಚಳಕ್ಕೆ ಪಕ್ಷಾತೀತವಾಗಿ ಬೇಡಿಕೆ ಇಡಲಾಗಿದೆ. ಇದನ್ನು ಕಡೆಗಣಿಸಬಾರದು ಎಂದು ಮನವಿ ಮಾಡಿದರು.
ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಗೌರವಧನ 1000 ಇದೆ, ಇದನ್ನು 2000ಕ್ಕೆ ಹೆಚ್ಚಳ ಮಾಡುವುದರಿಂದ ಅಷ್ಟು ಉಪಯೋಗವಾಗಲ್ಲ, ಕನಿಷ್ಠ 5 ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂದರು.
25 ಸದಸ್ಯರು ನಿರ್ಣಯ ಕೈಗೊಂಡಿದ್ದೇವೆ: ಕಾಂಗ್ರೆಸ್ ಸದಸ್ಯ ಎಸ್.ರವಿ ಮಾತನಾಡಿ, ಪರಿಷತ್‌ನಲ್ಲಿ ಸರ್ವಾನುಮತದಿಂದ ನಾವೆಲ್ಲಾ 25 ಸದಸ್ಯರು ನಿರ್ಣಯ ಕೈಗೊಂಡು ವೇತನ ಹೆಚ್ಚಳದ ಬೇಡಿಕೆ ಇಟ್ಟಿದ್ದೇವೆ. ಸರ್ಕಾರಿ ಯೋಜನೆಗಳ ಜಾರಿ ಮಾಡುವ ಇಂತಹ ಸದಸ್ಯರಿಗೆ ಗೌರವಧನ 10 ಸಾವಿರ ಕೊಡಬೇಕು ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಯಾವ ರೀತಿಯ ವ್ಯವಸ್ಥೆ ಇದೆ ಎನ್ನುವ ಕುರಿತು ಪರಿಷತ್ ಸದಸ್ಯರನ್ನು ಕಳುಹಿಸಿ ಸಮಗ್ರ ಮಾಹಿತಿ ಪಡೆದುಕೊಂಡು ನಿರ್ಧರಿಸಿದರೆ ಅನುಕೂಲ, ಸದನದಲ್ಲಿಯೂ ಇದೇ ಅಭಿಪ್ರಾಯ ವ್ಯಕ್ತವಾಯಿತು ಎಂದು ಸಿಎಂ ಗಮನಕ್ಕೆ ತಂದರು.
ಅಂತಿಮವಾಗಿ ಎಲ್ಲರ ಮನವಿ ಆಲಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಕುರಿತು ಪರಿಶೀಲನೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ನಿಮ್ಮನ್ನೂ ವಿಶ್ವಾಸಕ್ಕೆ ಪಡೆದೇ ನಿರ್ಧರಿಸಲಾಗುತ್ತದೆ ಎನ್ನುವ ಆಶ್ವಾಸನೆ ನೀಡಿದರು ಎಂದು ತಿಳಿದುಬಂದಿದೆ.