ಬೆಂಗಳೂರು: ಎಲ್ಲ ಕೊಳಚೆ ಪ್ರದೇಶಗಳನ್ನು ಉನ್ನತೀಕರಿಸಲು ಸಾಕಷ್ಟು ಪ್ರಮಾಣ ಸುರಕ್ಷಿತವಾದ ಮತ್ತು ಕೈಗೆಟುಕುವ ದರದಲ್ಲಿ ವಸತಿ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲು 2030ರ ಅವಧಿಗೆ ರಾಜ್ಯ ಸರ್ಕಾರ ಗುರಿ ಹೊಂದಿದೆ.
ತ್ವರಿತಗತಿಯಲ್ಲಿ ನಡೆಯುತ್ತಿರುವ ಆರ್ಥಿಕ ಉದಾರೀಕರಣದ ಮತ್ತು ನಗರೀಕರಣದ ಕಾರಣದಿಂದ ಯೋಜಿತ ನಗರ ಮೂಲಸೌಕರ್ಯ ಅಭಿವೃದ್ಧಿ ಮೀರಿ ಅನೌಪಚಾರಿಕ ವಸತಿ ಪ್ರದೇಶಗಳ ಅಥವಾ ಕೊಳಚೆ ಪ್ರದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿವೆ. ಇದರಿಂದ ಮೂಲ ಸೇವೆಗಳಾದ ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯಗಳ ವಿಚಾರದಲ್ಲಿ ಕೊರತೆ ಮತ್ತು ಅಸಮಾನತೆ ವಾದ ದೊರೆಯುವಿಕೆ ಹೆಚ್ಚಾಗುತ್ತಿದೆ.
ಕರ್ನಾಟಕದಲ್ಲಿ ಶೇ.17.43 ಜನರು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅನುಸೂಚಿತ ಮತ್ತು ಅನುಸೂಚಿತವಲ್ಲದ ಕೊಳಚೆ ಪ್ರದೇಶಗಳಲ್ಲಿ ಬದುಕುವವರು ಅರೆಬರೆ ಕಚ್ಚಾ ಮನೆಗಳಲ್ಲಿ (ಶೇ.45ರಷ್ಟು) ವಾಸಿಸುತ್ತಾರೆ. ಆದರೆ, ಅನುಸೂಚಿತ ಕೊಳಚೆ ಪ್ರದೇಶಗಳು, ಅನುಸೂಚಿತವಲ್ಲದ ಕೊಳಚೆ ಪ್ರದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿರುತ್ತವೆ.
ಅನುಸೂಚಿತ ಕೊಳಚೆ ಪ್ರದೇಶದಲ್ಲಿ ಶೇ.46 ರಷ್ಟು ಮನೆಗಳು ಅರ್ಧ- ಪಕ್ಕಾ ಮನೆಗಳಾಗಿದ್ದರೆ, ಅನುಸೂಚಿತವಲ್ಲದ ಕೊಳಚೆ ಪ್ರದೇಶಗಳಲ್ಲಿ ಇದರ ಪ್ರಮಾಣ ಶೇ.42.1 ಆಗಿರುತ್ತದೆ. ಇದರ ಜೊತೆಗೆ ಅನುಸೂಚಿತ ಕುಟುಂಬಗಳ ಪೈಕಿ ಶೇ.30.1 ರಷ್ಟು ಕುಟಂಬಗಳು ಪಕ್ಕಾ ವಸತಿಗಳಲ್ಲಿ ವಾಸಿಸುತ್ತಾರೆ. ಒಂದು ವೇಳೆ ಕುಡಿಯುವ ನೀರನ್ನು ಸ್ಥಳೀಯ ಸಂಸ್ಥೆಗಳು ಸರಬರಾಜು ಮಾಡಿದಾಗ ನೀರು ಪೈಪ್ಗಳಲ್ಲಿ ತಲುಪಿ, ನಲ್ಲಿ ನೀರಿನ ಮೂಲವಾಗಿರುತ್ತದೆ. ಇಲ್ಲಿ ನೀರು ಕೊಳಚೆ ಪ್ರದೇಶಗಳಲ್ಲಿ ಶೇ.70 ಜನರ ನೀರಿನ ಮೂಲವಾಗಿರುತ್ತದೆ.
ಸಾರ್ವಜನಿಕ ಶೌಚಾಲಯಗಳನ್ನು ಅನೇಕರು ಬಳಸುವುದರಿಂದ, ನೈರ್ಮಲ್ಯದ ದೃಷ್ಟಿಯಿಂದ ಇವು ಕ್ಷೇಮಕರವಲ್ಲ. ಬಹಳಷ್ಟು ಮನೆಗಳು ಸ್ವಂತದ ಶೌಚಾಲಯಗಳನ್ನು ಹೊಂದಿಲ್ಲದ ಆಧಾರದ ಮೇಲೆ ಬಹಳಷ್ಟು ಕೊಳಚೆ ಪ್ರದೇಶಗಳು ನೈರ್ಮಲ್ಯದ ದೃಷ್ಟಿಯಿಂದ ಅತ್ಯಂತ ಕಳಪೆ ಸ್ಥಿತಿಯಲ್ಲಿರುತ್ತವೆ. ಕರ್ನಾಟಕದ ಶೇ. 43 ಕೊಳಚೆ ಪ್ರದೇಶಗಳು ತಮ್ಮ ಪ್ರದೇಶದಲ್ಲಿ ಶೌಚಾಲಯಗಳನ್ನು ಹೊಂದಿರುವುದಿಲ್ಲ. ಇನ್ನು ಕರ್ನಾಟಕದ ಕೊಳಚೆ ಪ್ರದೇಶಗಳಲ್ಲಿ ಇರುವ ಶೇ.10 ಜನರು ವಿದ್ಯುತ್ ಸಂಪರ್ಕವನ್ನು ಹೊಂದಿರುವುದಿಲ್ಲ. ಅನುಸೂಚಿತ ಕೊಳಚೆ ಪ್ರದೇಶಗಳಲ್ಲಿ ಈ ಪ್ರಮಾಣ ಶೇ. 10 ಇದ್ದರೆ, ಅನುಸೂಚಿತವಲ್ಲದ ಪ್ರದೇಶದಲ್ಲಿ ಇದು ಶೇ. 11ರಷ್ಟು ಇರುತ್ತದೆ, ಶೌಚಾಲಯಗಳು ಮಾನವನ ಬದುಕಿನಲ್ಲಿ ಶುಚಿತ್ವ ಮತ್ತು ನೈರ್ಮಲ್ಯದ ದ್ಯೋತಕವಾಗಿರುತ್ತವೆ. ಇವು ಖಾಸಗಿಯಾಗಿರಲಿ, ಇಲ್ಲವೇ ಸಾರ್ವಜನಿಕವಾಗಿರಲಿ, ಅವು ಜನರಿಗೆ ಸುಲಭವಾಗಿ ಲಭ್ಯವಾಗುವಂತಿರಬೇಕಾಗುತ್ತದೆ. ಕೆಲವೇ ಕೆಲವು ಕೊಳಚೆ ಪ್ರದೇಶಗಳು ಖಾಸಗಿ ಶೌಚಾಲಯಗಳನ್ನು ಹೊಂದಿರುವುದನ್ನು ಸೂಚಿಸುತ್ತವೆ. ಬಹುತೇಕ ಕೊಳಚೆ ಪ್ರದೇಶಗಳು ಸಾರ್ವಜನಿಕ ಶೌಚಾಲಯಗಳನ್ನು ಹೊಂದಿರುತ್ತವೆ.
ಅನುಸೂಚಿತ ಕೊಳಚೆ ಪ್ರದೇಶಗಳ ಪೈಕಿ ಕೇವಲ ಶೇ. 8 ಮುಚ್ಚಿದ ಚರಂಡಿಯನ್ನು ಹೊಂದಿದ್ದರೆ, ಅನುಸೂಚಿತವಲ್ಲದ ಇದರ ಪ್ರಮಾಣ ಶೇ. 1.5 ಮಾತ್ರ ಆಗಿರುತ್ತದೆ. 2017-18ನೇ ಸಾಲಿನ ಹೊತ್ತಿಗೆ ಶೇ. 17.5 ಕೊಳಚೆ ಪ್ರದೇಶ/ಆರ್ಥಿಕವಾಗಿ ದುರ್ಬಲವಾದ ವರ್ಗದ (ಇಡಬ್ಲ್ಯೂಎಸ್) ಕುಟುಂಬಗಳು ಕೈಗೆಟುಕುವ/ಔಪಚಾರಿಕ ವಸತಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. 2030 ಅವಧಿಯೊಳಗೆ ವಸತಿ, ಶೌಚಾಲಯ, ಚರಂಡಿ ಸೇರಿದಂತೆ ಶೇ. 100 ರಷ್ಟು ವಸತಿ ಮತ್ತು ಮೂಲ ಸೌಕರ್ಯ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಓದಿ: ಹೃದಯ ವಿದ್ರಾವಕ: ಊಟವಿಲ್ಲದೇ ನರಳುತ್ತಿದ್ದ ಮಗು ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಫ್ಲೇಟ್ ನೆಕ್ಕಿತು!