ಬೆಂಗಳೂರು: ಮತದಾನ ಕೇಂದ್ರದ ಬಳಿ ರಜೆ ಸರ್ಕ್ಯುಲೇಶನ್ ಲೆಟರ್ಗೆ ಪೋಲಿಂಗ್ ಅಧಿಕಾರಿ ಸಹಿ ಹಾಕದಿರುವ ಕಾರಣಕ್ಕೆ ಸರ್ಕಾರಿ ನೌಕರರ ನಡುವೆ ಮಾತಿನ ಚಕಮಕಿ ಏರ್ಪಟ್ಟ ಘಟನೆ ನಡೆದಿದೆ.
ಇಲ್ಲಿನ ಜ್ಞಾನಭಾರತಿ ವಾರ್ಡ್‌ನ ಜ್ಞಾನ ಜ್ಯೋತಿ ನಗರದ ಹೆಚ್ಎಂಆರ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿನ ಪೋಲಿಂಗ್ ಅಧಿಕಾರಿ ಹಾಗೂ ಸರ್ಕಾರಿ ನೌಕರನೊಂದಿಗೆ ಮಾತಿನ ಚಕಮಕಿ ನಡಿದಿತ್ತು. ಮತಗಟ್ಟೆಯ ಒಳಗೆ ಅಧಿಕಾರಿಗಳ ಜೊತೆ ವಾಗ್ವಾದ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಮತದಾನಕ್ಕಾಗಿ ರಜೆ ನೀಡಿದ್ದ ಹಿನ್ನೆಲೆ ರಜೆ ಸರ್ಕ್ಯುಲೇಶನ್ ಲೆಟರ್ಗೆ ಪೋಲಿಂಗ್ ಅಧಿಕಾರಿಯ ಸಹಿ ಮತ್ತು ಸೀಲು ಬೇಕಾಗಿತ್ತು. ಈ ಹಿನ್ನೆಲೆ ಮತಕೇಂದ್ರದ ಬಳಿಕ ಬಂದಿದ್ದ ನೌಕರನಿಗೆ ಸಹಿ ಹಾಕಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಹಿನ್ನೆಲೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಇತ್ತ ರಾಜರಾಜೇಶ್ವರಿಯ ಮೌಂಟ್ ಕಾರ್ಮೆಲ್ ಸ್ಕೂಲ್ನ ಮತಕೇಂದ್ರದಲ್ಲಿ ಮತದಾರರ ಹೆಸರು ಬಿಟ್ಟುಹೋಗಿರುವ ಘಟನೆ ವರದಿಯಾಗಿದೆ. ಇಲ್ಲಿನ ಬಸವರಾಜು ಎಂಬುವರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದ್ದ ಹಿನ್ನೆಲೆ ಅಲ್ಲಿನ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹಲವು ಬಾರಿ ತಮ್ಮ ಹೆಸರಿನ ಬಗ್ಗೆ ಪರಿಶೀಲಿಸಿದರು ಅಧಿಕಾರಿಗಳು ಮಾತ್ರ ಸುಮ್ಮನೆ ಓಡಾಡಿಸುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತ ಚಲಾಯಿಸದೆ ಕುಟುಂಬ ಸಮೇತ ಮನೆಗೆ ವಾಪಸಾಗಿದ್ದಾರೆ.