ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವನಪ್ಪಿರುವ ಘಟನೆ ಬೆಂಗಳೂರಿನ ಸುಲ್ತಾನ್ ಪೇಟೆ ಬಳಿ ತಡರಾತ್ರಿ ನಡೆದಿದೆ. ಮಹೇಶ್ವರಿ (6) ಮೃತ ಬಾಲಕಿ. ಈಕೆ ಕಟ್ಟಡ ಕಾಮಗಾರಿಗಾಗಿ ಬಂದಿದ್ದ ದಂಪತಿಯ ಮಗಳು. ಐದು ಅಂತಸ್ತಿನ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ, ಬಾಲಕಿ ಆಟವಾಡುತ್ತಾ ಲಿಫ್ಟ್ ನಿರ್ಮಾಣಕ್ಕೆ ತೋಡಲಾಗಿದ್ದ ಗುಂಡಿಗೆ ಬಿದ್ದಿದ್ದಾಳೆ ಎನ್ನಲಾಗಿದೆ. ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕಾರಿನಡಿ ಬಿದ್ದರೂ ಗಮನಿಸದ ಚಾಲಕ: ಪುಟ್ಟ ಬಾಲಕಿ ದುರ್ಮರಣ
ಡಿಸಿಪಿ ಪ್ರತಿಕ್ರಿಯೆ: ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪೇಟೆ ಬಳಿ ನಿನ್ನೆ(ಶುಕ್ರವಾರ) ಕಟ್ಟಡದ ಕಾಮಾಗಾರಿ ನಡೆಯುತ್ತಿತ್ತು. ಇದು ಸುಮಾರು ಐದರಿಂದ ಆರು ಅಂತಸ್ತಿನ ಕಟ್ಟಡ. ನೆಲ ಮಹಡಿಯಿಂದ ಲಿಫ್ಟ್ ಮಾಡಲು ಗುಂಡಿ ತೆಗೆದು ನೀರು ತುಂಬಿಸಿದ್ದರು. ಅಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯಿರಲಿಲ್ಲ. ಜತೆಗೆ ನೀರು ತುಂಬಿಸಿದ ಗುಂಡಿ ನೆಲಕ್ಕೆ ಸಮತಟ್ಟಾಗಿರುವಂತೆ ಕಾಣುತ್ತದೆ. ನಿನ್ನೆ ಉಮೇಶ್ ಎಂಬ ಮೇಸ್ತ್ರಿಯನ್ನು ಭೇಟಿ ಮಾಡಲು ಮಲ್ಲಪ್ಪ ಎಂಬ ಕಾರ್ಮಿಕ ತನ್ನ ಹೆಂಡತಿ ಮಕ್ಕಳೊಂದಿಗೆ ಬಂದಿದ್ದರು. ಈ ವೇಳೆ, ಆಟವಾಡುತ್ತಾ ಬಾಲಕಿ ಮಹೇಶ್ವರಿ ಆ ಗುಂಡಿಯ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾಳೆ. ಈ ಹಿನ್ನೆಲೆ ನಿರ್ಲಕ್ಷ್ಯ ಪ್ರಕರಣ ದಾಖಲಾಗಿದೆ. 32/23 ಐಪಿಸಿ ಸೆಕ್ಷನ್ 302 ಅಡಿ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲಿಫ್ಟ್ ಗುಂಡಿಗೆ ಬಿದ್ದು ಮಗನ ನಿಶ್ಚಿತಾರ್ಥದ ದಿನದಂದೇ ತಂದೆ ಸಾವು
2 ವರ್ಷದ ಮಗು ಸಾವು: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ನ ಗುಂಡಿಯೊಳಗೆ ವಿನೋದ ಎಂಬ 2 ವರ್ಷದ ಮಗು ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿತ್ತು. ಕಟ್ಟಡದ ನಿರ್ಮಾಣ ಕೆಲಸಕ್ಕೆ ವಲಸೆ ಕಾರ್ಮಿಕರಾಗಿ ಬಂದಿರುವ ಪೋಷಕರು ಕಟ್ಟಡ ಬಳಿ ಶೆಡ್ ನಿರ್ಮಾಣ ಮಾಡಿಕೊಂಡು ವಾಸವಿದ್ದರು. ಆಟವಾಡುತ್ತ ಲಿಫ್ಟ್ ಬಳಿ ತೆರಳಿದ ಮಗು ಆಯ ತಪ್ಪಿ ಬಿದ್ದಿದೆ. ತಕ್ಷಣ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿತ್ತು. ಮಗುವಿನ ತಂದೆ - ತಾಯಿ ಮೂಲತಃ ಕೊಪ್ಪಳ ಜಿಲ್ಲೆಯವರಾಗಿದ್ದಾರೆ. ರಮೇಶ್ ಎಂಬುವವರಿಗೆ ಸೇರಿದ ಕಟ್ಟಡ ಇದಾಗಿದ್ದು, ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 304(ಎ) ಅಡಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು