ಬೆಂಗಳೂರು: ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಬೆಳ್ಳುಳ್ಳಿಯ ದರ ಒಂದು ಕೆಜಿಗೆ 400 ರೂಪಾಯಿ ತಲುಪಿದ್ದು, ಹೈಬ್ರಿಡ್ ಬೆಳ್ಳುಳ್ಳಿ ಧಾರಣೆಯು ಕೆಜಿಗೆ 300 ರೂಪಾಯಿ ದಾಟಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ನಗರದ ಯಶವಂತಪುರ ಈರುಳ್ಳಿ, ಆಲೂಗಡ್ಡೆ ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ಮಧ್ಯಪ್ರದೇಶ ಮತ್ತು ಗುಜರಾತ್ನಿಂದ ನಿತ್ಯ ಮೂರು ಸಾವಿರದಿಂದ ನಾಲ್ಕು ಸಾವಿರ ಚೀಲದಷ್ಟು ಬೆಳ್ಳುಳ್ಳಿ ಬರುತ್ತಿತ್ತು. ಆದರೆ, ಈ ಬಾರಿ ನಿರೀಕ್ಷಿತ ಫಸಲು ಬರದ ಕಾರಣ ಉತ್ತಮ ದರ್ಜೆಯ ಹೈಬ್ರಿಡ್ ಬೆಳ್ಳುಳ್ಳಿ ದರ 260 ರೂಪಾಯಿಗೆ ಏರಿಕೆ ಕಂಡಿರುವುದರಿಂದ ರಿಟೇಲ್ ದರ ಕೂಡ ಹೆಚ್ಚಾಗಿದ್ದು, ಇದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆ ಕೊರತೆಯಿಂದ ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಜಿಲ್ಲೆಗಳಿಂದ ಪೂರೈಕೆಯಾಗುತ್ತಿದ್ದ ಬೆಳ್ಳುಳ್ಳಿ ಕಡಿಮೆಯಾಗಿದೆ. ಈ ಬಾರಿ ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಮಳೆ ಕೊರತೆಯಾಗಿದೆ. ಇದು ಬೆಳ್ಳುಳ್ಳಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿ ಸಗಟು ಧಾರಣೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಪೂರೈಕೆ ಕಡಿಮೆ ಆಗಿರುವುದೇ ದರ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎಂದು ಯಶವಂತಪುರ ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಏರಿಕೆಯಾದ ಚಿಲ್ಲರೆ ಹಣದುಬ್ಬರ: ಅಕ್ಟೋಬರ್ನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ಶೇಕಡಾ 4.87ಕ್ಕೆ ಇಳಿಕೆಯಾಗಿದ್ದ ಭಾರತದ ಚಿಲ್ಲರೆ ಹಣದುಬ್ಬರವು ನವೆಂಬರ್ನಲ್ಲಿ ಶೇಕಡಾ 5.55ಕ್ಕೆ ಹೆಚ್ಚಳವಾಗಿತ್ತು. ಈರುಳ್ಳಿ, ಹಣ್ಣು ಮತ್ತು ಬೇಳೆ ಕಾಳುಗಳು, ತರಕಾರಿಗಳ ಬೆಲೆಗಳು ತುಂಬಾ ಏರಿಕೆಯಾಗಿದ್ದರಿಂದ ಒಟ್ಟಾರೆ ಗ್ರಾಹಕ ಬೆಲೆಯ ಅರ್ಧದಷ್ಟು ಭಾಗವನ್ನು ಹೊಂದಿರುವ ಆಹಾರ ಹಣದುಬ್ಬರವು ನವೆಂಬರ್ ತಿಂಗಳಿನಲ್ಲಿ ಶೇಕಡಾ 8.7ರಷ್ಟು ಹೆಚ್ಚಳವಾಗಿತ್ತು ಎಂದು ಸಚಿವಾಲಯದ ಅಂಕಿ, ಅಂಶಗಳು ಹೇಳಿವೆ.
ದೇಶದ ಆಹಾರದಲ್ಲಿ ಪ್ರೋಟೀನ್ಗಳ ಮುಖ್ಯ ಮೂಲವಾಗಿರುವ ಬೇಳೆಕಾಳುಗಳ ದರಗಳು ತಿಂಗಳಲ್ಲಿ ಶೇಕಡಾ 20.2 ರಷ್ಟು ಹೆಚ್ಚಳವಾಗಿದ್ದರೆ, ತರಕಾರಿ ಬೆಲೆಗಳು ಶೇಕಡಾ 17.7ರಷ್ಟು ಹಾಗೂ ಹಣ್ಣುಗಳು ಶೇಕಡಾ 10.9 ರಷ್ಟು ಏರಿಕೆಯಾಗಿವೆ. ಧಾನ್ಯಗಳ ಬೆಲೆಗಳು ಸಹ ತೀವ್ರವಾಗಿ ಏರಿಕೆಯಾಗಿದ್ದರೆ, ಮಸಾಲೆ ವಸ್ತುಗಳು ಶೇಕಡಾ 21.55 ರಷ್ಟು ಹೆಚ್ಚಳವಾಗಿವೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಕೆ ಮಾಡಿದರೆ, ಇಂಧನ ಬೆಲೆಗಳಲ್ಲಿ ಸ್ವಲ್ಪ ಇಳಿಯಾಗಿದೆ. ಕೇಂದ್ರ ಸರ್ಕಾರವು ಎಲ್ಪಿಜಿ ಬೆಲೆ ಇಳಿಕೆ ಮಾಡಿದೆ. ಪ್ರಸ್ತುತ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿ ಇರಿಸಲಾಗಿದೆ.
ಇದನ್ನೂ ಓದಿ: ಸಮಗ್ರ ಕೃಷಿಯತ್ತ ಮುಖಮಾಡಿದ ರೈತ: ತೈವಾನ್ ಪಿಂಕ್ ಪೇರಲ ಸೇರಿ 7 ಬಗೆಯ ಬೆಳೆ ಬೆಳೆದ ನಿಂಗನಗೌಡ