ಬೆಂಗಳೂರು : ಉಪಚುನಾವಣೆ ಸತ್ಯ ಹಾಗೂ ಅಸತ್ಯಗಳ ನಡುವೆ ನಡೆಯುತ್ತಿರುವ ಹೋರಾಟ ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೂರಕ್ಕೂ ಹೆಚ್ಚು ಮಂದಿ ಜೆಡಿಎಸ್ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಸತ್ಯ ಹಾಗೂ ಬಿಜೆಪಿಯ ಅಸತ್ಯಗಳ ನಡುವಿನ ಹೋರಾಟ ನಡೆಯುತ್ತಿದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಕಲ ರೀತಿಯ ಪ್ರಯತ್ನ ಮಾಡಿದೆ. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಅಸತ್ಯದಿಂದಲೇ ತಮ್ಮ ಅಧಿಕಾರ ಸಾಧಿಸಿದ್ದಾರೆ.
4ನೇ ಬಾರಿ ಅಧಿಕಾರ ಹಿಡಿದಿರುವ ಯಡಿಯೂರಪ್ಪ ಇದೇ ಮೊದಲ ಬಾರಿಗೆ ಸ್ವಲ್ಪ ಹೆಚ್ಚು ದಿನ ಅಧಿಕಾರ ನಡೆಸಿದ್ದಾರೆ. ಆದರೆ, ಈ ಸರ್ಕಾರ ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೋವಿಡ್ನಿಂದಾಗಿ ಜನ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಆದರೆ, ಈ ಮಹಾಮಾರಿಗೆ ಚಿಕಿತ್ಸೆ ನೀಡುವ ಸಲಕರಣೆಗಳ ವಿಚಾರದಲ್ಲಿಯೂ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದರೆ ಯಾವ ಹಂತಕ್ಕೆ ಸರ್ಕಾರ ಇಳಿದಿದೆ ಎನ್ನುವುದನ್ನು ತೋರಿಸುತ್ತದೆ ಎಂದರು.
ಜನ ಕಷ್ಟದಲ್ಲಿರುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಸರ್ಕಾರಕ್ಕೆ ನಾಚಿಕೆ ಆಗಬೇಕು. ಪ್ರತಿದಿನ ಒಂದಲ್ಲ ಒಂದು ಭ್ರಷ್ಟಾಚಾರ ಹೊರಬೀಳುತ್ತಿದೆ. ಯಾವುದೇ ಕೆಲಸ ಆಗಬೇಕಾದ್ರೆ ಹಣ ಕೊಡಬೇಕಾದ ಸ್ಥಿತಿ ಇದೆ. ನಾವು ಸಾಕಷ್ಟು ಸರ್ಕಾರ ನೋಡಿದ್ದೇವೆ ಹಾಗೂ ಅಧಿಕಾರವನ್ನು ನಡೆಸಿದ್ದೇವೆ. ಆದರೆ, ಇಂಥದ್ದೊಂದು ಭ್ರಷ್ಟ ಸರ್ಕಾರವನ್ನು ಎಲ್ಲೂ ನೋಡಿರಲಿಲ್ಲ. ಉಪಚುನಾವಣೆ ನಿಜಕ್ಕೂ ಇಡೀ ರಾಜ್ಯಕ್ಕೆ ಒಂದು ಸಂದೇಶ ನೀಡಬೇಕಿದೆ.
ಜನರ ಕಷ್ಟಕ್ಕೆ ಸ್ಪಂದಿಸುವ ಹಾಗೂ ಸತ್ಯದ ಪರ ನಿಂತ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು ಹಾಗೂ ಇದು ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂಬುದನ್ನು ತೋರಿಸಿ ಕೊಡಬೇಕು ಎಂದರು.
ರಾಜ್ಯ ಹಾಗೂ ತುಮಕೂರು ಜಿಲ್ಲೆಯ ಪಾಲಿಗೆ ಉಪಚುನಾವಣೆ ಅತ್ಯಂತ ಮುಖ್ಯ. ಒಗ್ಗಟ್ಟಾಗಿ ಹಿಂದೆ ಕಾರ್ಯನಿರ್ವಹಿಸಿದ ಸಂದರ್ಭ 11 ವಿಧಾನಸಭಾ ಕ್ಷೇತ್ರಗಳ ಪೈಕಿ 8-9 ಕ್ಷೇತ್ರಗಳನ್ನು ಗೆದ್ದ ಇತಿಹಾಸ ಇದೆ. ಜಿಲ್ಲೆಯಲ್ಲಿ ನಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಬಿಟ್ಟು ಎಲ್ಲಾ ನಾಯಕರು ಒಂದಾಗಿದ್ದೇವೆ. ಅಂದಹಾಗೆ ಇದು ಅಷ್ಟೊಂದು ಸುಲಭವಾದ ಚುನಾವಣೆ ಅಲ್ಲ. ಸಾಕಷ್ಟು ಕಠಿಣವಾದ ಸವಾಲುಗಳು ಕೂಡ ನಮ್ಮ ಮುಂದಿದೆ.
ಆಡಳಿತ ಪಕ್ಷ ಎಷ್ಟು ಹಣ ಬೀಸಲಿದೆ ಎಂಬ ಅರಿವು ನಮಗಿದೆ. ಇದನ್ನು ಮೀರಿ ಚುನಾವಣೆ ನಮಗೆ ಬಹಳ ಮುಖ್ಯ ಎಂಬುದನ್ನು ಪರಿಗಣಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಿದೆ. ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಮೇಲೂ ಸಾಕಷ್ಟು ದೊಡ್ಡ ಸವಾಲಿದೆ. ಅವರ ಪ್ರಯತ್ನಕ್ಕೆ ನಾವು ಯಶಸ್ಸು ತಂದುಕೊಡುವ ಸಂಕಲ್ಪ ಮಾಡೋಣ ಎಂದರು.
ಜನರಿಗೆ ಮಾಹಿತಿ ತಲುಪಿಸಿ : ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ಮಾತನಾಡಿ, ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಟಿ ಬಿ ಜಯಚಂದ್ರರ ಗೆಲುವು ಅನಿವಾರ್ಯ. ಇವರ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ತೋರಿಸಬೇಕಾಗಿದೆ. ಜೆಡಿಎಸ್ ಪಕ್ಷದಿಂದ ಸಾಕಷ್ಟು ನಾಯಕರು ಇಂದು ಸೇರ್ಪಡೆಯಾಗುತ್ತಿದ್ದಾರೆ. ಇದು ಸಂತಸದ ಸಂಗತಿ.
ಈ ಚುನಾವಣೆ ನಮ್ಮ ಪಾಲಿಗೆ ಸುಲಭದ್ದಲ್ಲ. ನೀವೆಲ್ಲ ಜನರ ಮಧ್ಯೆ ಇರುವುದರಿಂದ ಇಲ್ಲಿ ಜನರ ಬೆಂಬಲ ಗಳಿಸಿ ಪಕ್ಷವನ್ನು ಗೆಲ್ಲಿಸಿ ಕೊಡುವುದು ಕಷ್ಟದ ಮಾತಲ್ಲ. ಕಾಂಗ್ರೆಸ್ ಪಕ್ಷದ ಸಾಧನೆ ಉಪಚುನಾವಣೆ ಗೆಲುವಿಗೆ ಶ್ರೀರಕ್ಷೆಯಾಗಲಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ವರ್ಷ ನೀಡಿದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿದರೆ ಸಾಕು. ಅಲ್ಲದೆ ಹತ್ತು ವರ್ಷ ಕೇಂದ್ರದಲ್ಲಿ ಯುಪಿಎ ಸರ್ಕಾರ ನೀಡಿದ ಕೊಡುಗೆಗಳನ್ನು ನೆನಪಿಸಿದರೆ ಸಾಕು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದಿನ ಸಮಾರಂಭದಲ್ಲಿ ಶಿರಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಪಕ್ಷದ ಬಾವುಟ ನೀಡುವ ಮೂಲಕ ಅಧಿಕೃತವಾಗಿ ಕಾಂಗ್ರೆಸ್‌ಗೆ ಬರಮಾಡಿಕೊಂಡರು.