ಬೆಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿಗಳಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡು ವಂಚಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ದೊಡ್ಡಬೊಮ್ಮಸಂದ್ರ ನಿವಾಸಿ ಅರುಣಾ ಎಂಬುವರು ನೀಡಿದ ದೂರಿನ ಮೇರೆಗೆ ವಿಆರ್ವಿ ವೆಂಚರ್ಸ್ ಕಂಪನಿಯ ನಾಲ್ವರು ವಂಚಕರ ವಿರುದ್ಧ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಶ್ರೀನಿವಾಸ್ ಅಯ್ಯಾಂಗಾರ್ ಎಂಬಾತ ವಿಆರ್ವಿ ವೆಂಚರ್ಸ್ ಹಾಗೂ ಮ್ಯಾನ್ಟವರ್ ಸಾಫ್ಟ್ವೇರ್ ಕನ್ಸಲ್ಟೆಂಟ್ ಸ್ಥಾಪಿಸಿದ್ದ. ಕಂಪನಿಯ ಇನ್ನಿತರ ಸಹಚರರ ಜೊತೆ ಸೇರಿ, ನಿರುದ್ಯೋಗಿಗಳಿಂದ 2 ಲಕ್ಷ ಹಣ ಪಡೆದು ಬಳಿಕ ಕೆನಡಾದ ಐಬಿಎಂ ಕಂಪನಿ ಹೆಸರಿನಲ್ಲಿ ನಕಲಿ ಆಫರ್ ಲೆಟರ್ನ್ನು ಇ-ಮೇಲ್ ಮೂಲಕ ಅವರಿಗೆ ಕಳುಹಿಸುತ್ತಿದ್ದ.
ಆಫರ್ ಲೆಟರ್ ನೋಡಿ ವಿದೇಶದಲ್ಲಿ ಜಾಬ್ ಸಿಕ್ಕಿ ಲೈಫ್ ಸೆಟಲ್ ಆಗಬಹುದು ಅಂದುಕೊಂಡಿದ್ದ ನಿರುದ್ಯೋಗಿಗಳಿಗೆ ವಂಚಕರ ಬಣ್ಣ ಬಯಲಾಗುತ್ತಿದ್ದಂತೆ ಶಾಕ್ ಹೊಡೆದಂತಾಗಿದೆ. ಇತ್ತ ಕೆಲಸವೂ ಇಲ್ಲದೆ ಕೊಟ್ಟ ಹಣವೂ ವಾಪಸ್ ಸಿಗದ ಕಾರಣ ಬೇಸತ್ತು ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.