ಬೆಂಗಳೂರು: ಅಸಲಿ ಎಂಬಂತೆ ಬಿಂಬಿಸಿ ನಕಲಿ ಚಿನ್ನಾಭರಣಗಳನ್ನು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಅಡಮಾನವಿಟ್ಟು ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಗ್ಯಾಂಗ್ ವಿಜಯನಗರ ಪೊಲೀಸರಿಗೆ ಬಲೆಗೆ ಬಿದ್ದಿದೆ.
ಸಾಲ ತೀರಿಸಲು ಚಿನ್ನಾಭರಣ ಅಡ ಇಟ್ಟಿರುವುದಾಗಿ ಹೇಳಿ ನಕಲಿ ಚಿನ್ನಾಭರಣಗಳನ್ನು ಅಸಲಿ ಗೋಲ್ಡ್ ಎಂದು ನಂಬಿಸಿ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಬ್ಯಾಂಕ್ಗಳಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದ ಮೂವರು ಖತರ್ ನಾಕ್ ವಂಚಕರನ್ನು ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅರುಣ್, ಸತ್ಯಾನಂದ ಹಾಗೂ ದತ್ತಾತ್ರೇಯ ಬಾಕಳೆ ಬಂಧಿತ ಆರೋಪಿಗಳಿಂದ ಸುಮಾರು ಒಂದೂವರೆ ಕೆಜಿ ಚಿನ್ನ ಜಪ್ತಿ ಮಾಡಿಕೊಳ್ಳಲಾಗಿದೆ.
ಕಳೆದ ಸಪ್ಟೆಂಬರ್ 29ರಂದು ಸತ್ಯಾನಂದ ಹಾಗೂ ನಾಪತ್ತೆಯಾಗಿರುವ ಜಯಲಕ್ಷ್ಮಿ ಇಬ್ಬರು ಬ್ಯಾಂಕ್ ಆಫ್ ಬರೋಡಾಗೆ ಬಂದು 235 ಗ್ರಾಂ ನಕಲಿ ಚಿನ್ನವನ್ನ ಅಡಮಾನವಿರಿಸಿ ಏಳೂವರೆ ಲಕ್ಷ ಹಣ ಪಡೆಯಲು ಪಡೆಯಲು ಮುಂದಾಗಿದ್ದರು. ಈ ವೇಳೆ, ಬ್ಯಾಂಕ್ ಮ್ಯಾನೇಜರ್ಗೆ ಅನುಮಾನ ಬಂದು ಪರಿಶೀಲಿಸಿದಾಗ ನಕಲಿ ಚಿನ್ನಾಭರಣ ಎಂದು ಕಂಡು ಬಂದಿದ್ದರಿಂದ ವಿಜಯನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಪ್ರಕರಣದ ಆರೋಪಿಯಾಗಿರುವ ದತ್ತಾತ್ರೇಯ ಬಾಕಳೆ ತಂದೆ ಗದರ ನಗರಸಭಾ ಸದಸ್ಯರಾಗಿದ್ದಾರೆ ಎನ್ನಲಾಗುತ್ತಿದೆ. ತಾಮ್ರದ ಮೇಲೆ ಚಿನ್ನದ ಲೇಪನ ಮಾಡಿ ಹಾಲ್ ಮಾರ್ಕ್ ಗುರುತಿರುವ ಡ್ಯೂಪ್ಲಿಕೇಟ್ ಗೋಲ್ಡ್ಗಳನ್ನೇ ರಾಷ್ಟ್ರಿಕೃತ ಬ್ಯಾಂಕ್ಗಳಲ್ಲಿ ಅಡಮಾನವಿರಿಸಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡಿ ಗೋವಾಕ್ಕೆ ತೆರಳಿ ಶೋಕಿ ಜೀವನ ನಡೆಸುತ್ತಿದ್ದರು. ಪಶ್ಚಿಮ ಬಂಗಾಳದಿಂದ ಈ ನಕಲಿ ಚಿನ್ನಾಭರಣಗಳನ್ನು ಕೊರಿಯರ್ ಮೂಲಕ ತರಿಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಇದೇ ತಂತ್ರ ಬಳಸಿ ಬೆಂಗಳೂರು, ಗದಗ, ಹುಬ್ಬಳ್ಳಿ, ಕೊಪ್ಪಳ ಸೇರಿದಂತೆ ಗುಜರಾತ್ ಸೂರತ್ನಲ್ಲಿಯೂ ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪ್ರೇಯಸಿಗಾಗಿ ಮಾರಣಾಂತಿಕ ಇಂಜೆಕ್ಷನ್ ನೀಡಿ ಪತ್ನಿ ಸಾಯಿಸಿದ ಪುರುಷ ನರ್ಸ್!