ಬೆಂಗಳೂರು : ನಗರದಲ್ಲಿ ಐಪಿಎಲ್ ಹಾಗೂ ಹುಟ್ಟುಹಬ್ಬದ ಸಂಭ್ರಮ ಹೆಚ್ಚಾದಂತೆ ಮಧ್ಯರಾತ್ರಿ ಕ್ರಿಕೆಟ್ ಪ್ರೇಮಿಗಳು ಹಾಗೂ ಬೆಂಬಲಿಗರು ಪಟಾಕಿ ಸಿಡಿಸುತ್ತಿರುವುದರಿಂದ ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಅವಕಾಶ ನೀಡದಂತೆ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಪಶ್ಚಿಮ ವಿಭಾಗದ ಡಿಸಿಪಿಗೆ ಪತ್ರ ಬರೆದಿದ್ದಾರೆ.
ಕಳೆದ ಎರಡು ತಿಂಗಳಿಂದ ಐಪಿಎಲ್ ಪಂದ್ಯಾವಳಿ ನಡೆಯುತ್ತಿದೆ. ತಮ್ಮ ನೆಚ್ಚಿನ ತಂಡಗಳು ಗೆದ್ದಾಗ ಮಧ್ಯರಾತ್ರಿ ಪಟಾಕಿ ಹೊಡೆದು ಕ್ರಿಕೆಟ್ ಅಭಿಮಾನಿಗಳು ಸಂಭ್ರಮಾಚರಣೆ ನಡೆಸುತ್ತಾರೆ. ಅದೇ ರೀತಿ ಹುಟುಹಬ್ಬ ಆಚರಣೆ ವೇಳೆಯೂ ವಸತಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸುತ್ತಿರುವುದರಿಂದ ಅನೇಕರಿಗೆ ತೊಂದರೆಯಾಗುತ್ತಿದೆ.
ಪಟಾಕಿ ಹೊಡೆದು ಸಂಭ್ರಮಿಸಿದರೆ ವೃದ್ದರಿಗೆ ಮತ್ತು ಮಕ್ಕಳಿಗೆ ಹಾಗೂ ಖಾಯಿಲೆಯಿಂದ ಬಳಲುತ್ತಿರುವವರಿಗೆ ತೊಂದರೆಯಾಗಲಿದೆ. ಪಶು-ಪಕ್ಷಿಗಳಿಗೂ ಪಟಾಕಿಯಿಂದ ಎಫೆಕ್ಟ್ ಆಗಲಿದೆ. ಹೀಗಾಗಿ, ರಾತ್ರಿ 10ರ ನಂತರ ಈ ರೀತಿ ಸಂಭ್ರಮಿಸಲು ಅವಕಾಶ ನೀಡದಂತೆ ಡಿಸಿಪಿ ಸಂಜೀವ ಪಾಟೀಲ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.