ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಟಿ.ಜಾನ್ (92) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಮೂಲಸೌಕರ್ಯ ಮತ್ತು ಮೊಟ್ಟಮೊದಲ ಬಾರಿಗೆ ಸೃಷ್ಟಿಸಿದ್ದ ವಿಮಾನಯಾನ ಖಾತೆ ಸಚಿವರಾಗಿದ್ದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಜಾನ್ ಅವರು ಇಂದು ಬೆಳಗಿನ ಜಾವ 3.30ರ ಸಮಯದಲ್ಲಿ ತಮ್ಮ ಇಂದಿರಾನಗರ ನಿವಾಸದಲ್ಲಿ ಇಹಲೋಕ ತ್ಯಜಿಸಿದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
2010ರಿಂದ 2016ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಜಾನ್ ಅವರು ಪತ್ನಿ ಚಚ್ಚಮ್ಮಜಾನ್, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಶನಿವಾರ ಬೆಂಗಳೂರಿನಲ್ಲಿ ನಡೆಯಲಿದೆ. ರಾಜ್ಯ ಕಾಂಗ್ರೆಸ್ ನಾಯಕರು ಸಂಖ್ಯೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ. ನಾಳೆ ಅಂತ್ಯಕ್ರಿಯೆಯಲ್ಲಿ ಸಹ ಕೈ ನಾಯಕರು ಭಾಗಿಯಾಗಲಿದ್ದಾರೆ.
ಕೇರಳದಲ್ಲಿ ಜನಿಸಿದ್ದ ಇವರು, ಮಡಿಕೇರಿಯಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿ ಟಿ.ಜಾನ್ ಶಿಕ್ಷಣ ಸಂಸ್ಥೆ ಕಟ್ಟಿದ ಬಳಿಕ ಬೆಂಗಳೂರಿನಲ್ಲೇ ನೆಲೆ ಊರಿದರು. ಗುಜರಾತ್‌ನ ಕಛ್ ಜಿಲ್ಲೆಯಲ್ಲಿ 2001ರಲ್ಲಿ ಭೂಕಂಪ ಸಂಭವಿಸಿ, ಅಪಾರ ಹಾನಿಯಾಗಿತ್ತು. ಆ ಸಂದರ್ಭದಲ್ಲಿ 'ಅದು ಏಸುಕ್ರಿಸ್ತ ಕೊಟ್ಟ ಶಾಪ' ಎಂಬರ್ಥದ ಹೇಳಿಕೆ ನೀಡಿದ್ದರು. ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಅದೇ ದಿನವೇ, ಜಾನ್ ಅವರ ರಾಜೀನಾಮೆಯನ್ನು ಕೃಷ್ಣ ಪಡೆದುಕೊಂಡಿದ್ದರು.
ಕೆಲವು ವರ್ಷಗಳ ಹಿಂದೆ ಕೆಪಿಸಿಸಿ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದ ಅವರು ರಾಜಕಾರಣದಿಂದ ದೂರ ಉಳಿದಿದ್ದರು. ಹಿರಿಯ ರಾಜಕಾರಣಿ, ಕೊಡುಗೈ ದಾನಿ ಎಂದೇ ಖ್ಯಾತರಾಗಿದ್ದರು. ಅಬಕಾರಿ ಉದ್ಯಮದ ಮೂಲಕ ಹೆಸರು ಮಾಡಿದ್ದರು.
ಮುಖಂಡರ ಸಂತಾಪ: ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಟಿ ಜಾನ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರವಾಸದಲ್ಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಧಾನಸಭೆ ಕಲಾಪದಲ್ಲಿ ಭಾಗಿಯಾಗಿದ್ದ ಹಿನ್ನೆಲೆ ತೆರಳಿಲ್ಲ. ಮಾಜಿ ಸಚಿವ ಕೆಜೆ ಜಾರ್ಜ್ ಹಾಗೂ ವಿಧಾನ ಪರಿಷತ್ ಉಪನಾಯಕ ಟಿ ಗೋವಿಂದರಾಜು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯ; ಮೊದಲ ದಿನವೇ ಕಲಾಪಕ್ಕೆ ಗೈರಾದ ಪ್ರತಿಪಕ್ಷ ನಾಯಕ