ಬೆಂಗಳೂರು: ಡಿ.ಜೆ.ಹಳ್ಳಿ ಹಾಗು ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ, ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅಧಿಕ ರಕ್ತದೊತ್ತಡದ ಪರಿಣಾಮ ಹೆಬ್ಬಾಳದ ಬ್ಯಾಪ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ಇವರನ್ನು ಒಮ್ಮೆ ವಿಚಾರಣೆ ನಡೆಸಿದ್ದರು. ಮತ್ತೊಮ್ಮೆ ವಿಚಾರಣೆ ಎದುರಿಸಲು ಸೂಚಿಸಿದಾಗ ಕೊರೊನಾ ನೆಪ ಹೇಳಿ ಸಂಪತ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಪೊಲೀಸರು ಕರೆಯದಿದ್ರೂ ನಿನ್ನೆ ವಿಚಾರಣೆಗೆ ಹಾಜರಾಗುವುದಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ರು. ಆದರೆ ಮತ್ತೆ ಬಿಪಿ ನೆಪ ಹೇಳಿ ನಿನ್ನೆ ವಿಚಾರಣೆಗೆ ಹಾಜರಾಗದೇ ಆಸ್ಪತ್ರೆ ಸೇರಿಕೊಂಡಿದ್ದಾರೆ.
ಇತ್ತ ಕಡೆ ಗಲಭೆ ಪ್ರಕರಣ ಸಂಬಂಧ ಇದೇ 14ರ ಒಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿಸಿಬಿ ಸಿದ್ದತೆ ನಡೆಸಿದೆ. ದೋಷಾರೋಪ ಪಟ್ಟಿಯಲ್ಲಿ ರಾಜಕೀಯ ಹುನ್ನಾರದ ಮಾಹಿತಿ ನಮೂದು ಮಾಡಬೇಕಾಗುತ್ತದೆ. 14ರ ಒಳಗೆ ವಿಚಾರಣೆಗೆ ಹಾಜರಾಗದೆ ಇದ್ದರೆ ದೋಷಾರೋಪ ಪಟ್ಟಿಯಲ್ಲಿ ಮಾಜಿ ಮೇಯರ್ ಪಾತ್ರದ ಬಗ್ಗೆ ನಮೂದು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.