ಬೆಂಗಳೂರು : ಕೆಪಿಸಿಸಿಯ ವಿವಿಧ ಸಮಿತಿಗಳ ರಚನೆ ಹಾಗೂ ಪದಾಧಿಕಾರಿಗಳ ನೇಮಕ ವಿಚಾರದಲ್ಲಾಗುತ್ತಿರುವ ವಿಳಂಬಕ್ಕೆ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚುತ್ತಿದೆ.
ಆಂತರಿಕ ಭಿನ್ನಾಭಿಪ್ರಾಯದಿಂದ ವಿಳಂಬ
ಪಕ್ಷದ ರಾಜ್ಯ ನಾಯಕರ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಮೇಲಾಟದಿಂದಾಗಿ ಕೆಪಿಸಿಸಿ ಪದಾಧಿಕಾರಿಗಳ ನೇಮಕ ವಿಳಂಬವಾಗುತ್ತಿದೆ. ನಾಯಕರ ಪ್ರತಿಷ್ಠೆಗೆ ನಮ್ಮ ಭವಿಷ್ಯವೇಕೆ ಬಲಿಯಾಗಬೇಕು ಎಂಬ ಪ್ರಶ್ನೆಯನ್ನು ಕೆಲ ಕಾರ್ಯಕರ್ತರು ಎತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ಭಿನ್ನದನಿ ಹೆಚ್ಚಾಗುವ ಸಾಧ್ಯತೆ ಇದೆ. ಪಕ್ಷದ ನಾಯಕರಿಗೆ ಇದೊಂದು ತಲೆಬಿಸಿಯಾಗಿ ಕಾಡುವಲ್ಲಿ ಸಂಶಯವಿಲ್ಲ.
ಸಿದ್ದರಾಮಯ್ಯರನ್ನು ಮೀರಿ ನಡೆಯುವಂತಿಲ್ಲ ಡಿಕೆಶಿ?
ಸಾಕಷ್ಟು ಮಂದಿ ಆಕಾಂಕ್ಷಿಗಳು ಬಹು ದಿನಗಳಿಂದ ಖಾಲಿ ಉಳಿದಿರುವ ಕೆಪಿಸಿಸಿಯ ವಿವಿಧ ಸಮಿತಿಗೆ ತಮ್ಮನ್ನು ನೇಮಿಸುವಂತೆ ಪ್ರತಿ ದಿನ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಐವರು ಕಾರ್ಯಾಧ್ಯಕ್ಷರ ಮನೆಗಳಿಗೆ ಎಡತಾಕುತ್ತಿದ್ದಾರೆ. ಇದರ ಜೊತೆ ಜೊತೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜ್ಯ ಕಾಂಗ್ರೆಸ್ ನಾಯಕರ ಮೇಲೂ ಸಹ ಪಕ್ಷದ ಮುಖಂಡರು ಒತ್ತಡ ತರುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲಿಗರು ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರು ಸಮಾನ ಸಂಖ್ಯೆಯಲ್ಲಿ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ವಿಚಾರ ಬಂದಾಗ ಶಿವಕುಮಾರ್ ಅಂತಿಮವಾದರೂ, ಸಿದ್ದರಾಮಯ್ಯರನ್ನು ಮೀರಿ ಮುಂದುವರಿಯುವಂತಿಲ್ಲ.
ಡಿಕೆಶಿ ವಿಫಲ ಯತ್ನ.. ಸಿದ್ದು ಬೆಂಬಲಿಗರ ಆಕ್ರೋಶ
ವಿವಿಧ ಜಿಲ್ಲಾಧ್ಯಕ್ಷರ ಬದಲಾವಣೆ ಆಗಬೇಕಿದೆ. ಮಾಜಿ ಸಚಿವರು, ಪರಾಜಿತ ಶಾಸಕರು ಈ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಮಾಜಿ ಸಂಸದರು ಕೂಡ ಪೈಪೋಟಿಗೆ ಇಳಿದಿದ್ದಾರೆ. ಪಕ್ಷ ಅಧಿಕಾರದಲ್ಲಿ ಇಲ್ಲದ ಹಿನ್ನೆಲೆ ಎಲ್ಲರಿಗೂ ಆಯಕಟ್ಟಿನ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ. ಈಗಾಗಲೇ ಒಂದೆರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ಹಾಗೂ ನೇಮಕದ ಪ್ರಯತ್ನವನ್ನು ಡಿಕೆಶಿ ಮಾಡಿದ್ದಾರೆ. ಆದರೆ, ಡಿಕೆಶಿ ನಡೆಗೆ ಸಿದ್ದರಾಮಯ್ಯ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹುತೇಕ ಇದೇ ಸ್ಥಿತಿ ಸಮಿತಿಗೆ ನೇಮಕವಾದಾಗಲೂ ಆಗಲಿದೆ. ಇದರಿಂದ ಅನಿವಾರ್ಯವಾಗಿ ಯಾವ ಸಂದರ್ಭದಲ್ಲಿ ಪದಾಧಿಕಾರಿಗಳ ನೇಮಕ ಮಾಡಬೇಕು ಎಂಬ ವಿಚಾರ ಬಗೆಹರಿಯದೆ ಎಲ್ಲ ನಾಯಕರು ಗೊಂದಲದಲ್ಲಿದ್ದಾರೆ. ಸದ್ಯ ರಾಜ್ಯ ನಾಯಕರು ತಮ್ಮ ಮೇಲಿನ ಒತ್ತಡವನ್ನು ಉಪ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಯತ್ತ ಹೊರಳಿಸುವ ಪ್ರಯತ್ನ ಮಾಡಿದ್ದಾರೆ.
‘ಪದಾಧಿಕಾರಿಗಳ ನೇಮಕಕ್ಕೆ 4 ತಿಂಗಳು ಕಾಯಲೇಬೇಕು’
ವಿಧಾನಸಭೆಯ ಎರಡು ಸ್ಥಾನಗಳಿಗೆ ಅಕ್ಟೋಬರ್ 30ರಂದು ನಡೆಯುವ ಚುನಾವಣೆ ಹಾಗೂ ಡಿಸೆಂಬರ್, ಜನವರಿ ತಿಂಗಳಲ್ಲಿ ನಡೆಯುವ ವಿಧಾನ ಪರಿಷತ್ನ 25 ಸ್ಥಾನಗಳ ಚುನಾವಣೆಯನ್ನು ಪ್ರಮುಖವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ. ಪ್ರಚಾರ ಹಾಗೂ ವಿವಿಧ ಪ್ರವಾಸಗಳನ್ನು ಹಮ್ಮಿಕೊಂಡಿರುವ ಹಿನ್ನೆಲೆ ಚುನಾವಣೆ ಬಳಿಕವೇ ಪದಾಧಿಕಾರಿಗಳ ನೇಮಕವಾಗಲಿದೆ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರಾಜ್ಯ ಕಾಂಗ್ರೆಸ್ ನಾಯಕರು ನೀಡಿದ್ದಾರೆ. ಇನ್ನೂ ಮೂರ್ನಾಲ್ಕು ತಿಂಗಳು ಕಾಯುವ ಅನಿವಾರ್ಯ ಇರುವ ಮಾಹಿತಿ ಲಭಿಸುತ್ತಿದ್ದಂತೆ, ಕಾರ್ಯಕರ್ತರಲ್ಲಿ ಆಕ್ರೋಶ ಹೆಚ್ಚಾಗಿದೆ.
ಆಂತರಿಕ ಸಂಘರ್ಷ ಮರೆಮಾಚಲು ಯತ್ನ
ಈ ಎರಡು ಚುನಾವಣೆಗಳ ಬಳಿಕ ಬಹುತೇಕ ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ಗಳಿಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ. ಅದಾದ ಬಳಿಕ ಬಿಬಿಎಂಪಿ ಚುನಾವಣೆ ನಡೆಯುವ ಮುನ್ಸೂಚನೆ ಇದೆ. ಈ ಎಲ್ಲವುಗಳ ಮಧ್ಯೆ 2023ರ ವಿಧಾನಸಭೆ ಚುನಾವಣೆ ಇನ್ನೂ ಒಂದೂವರೆ ವರ್ಷ ಮಾತ್ರ ಬಾಕಿ ಉಳಿದಿದೆ. ರಾಜ್ಯ ನಾಯಕರ ಆಂತರಿಕ ಸಂಘರ್ಷ ಮರೆಮಾಚಲು ಚುನಾವಣೆಗಳ ನೆಪ ಮುಂದಿಟ್ಟು ರಾಜ್ಯ ನಾಯಕರು ಕೆಪಿಸಿಸಿ ಪದಾಧಿಕಾರಿಗಳ ನೇಮಕವನ್ನು ಮುಂದೂಡುವ ಯತ್ನ ಮಾಡುತ್ತಿದ್ದಾರೆ. ಇದು ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರಲ್ಲಿ ತೀವ್ರ ಬೇಸರವನ್ನುಂಟು ಮಾಡಿದೆ.
ಹೈಕಮಾಂಡ್ ಒಪ್ಪಿಗೆ ನೀಡಿದ್ದರೂ, ರಾಜ್ಯನಾಯಕರ ಹಿಂದೇಟು
ತಳ ಮಟ್ಟದ ನಾಯಕರ ವಿಶ್ವಾಸ ಗಳಿಸಲೇಬೇಕು. ಅವರಿಗೆ ಕೊಟ್ಟರೆ ಇವರಿಗೆ ಬೇಸರ, ಇವರಿಗೆ ಕೊಟ್ಟರೆ ಅವರಿಗೆ ಬೇಸರ ಅನ್ನುವಂತೆ ಆಗಬಾರದು. ಇದನ್ನು ಸರಿಪಡಿಸಲಾಗದೇ, ಸಮಿತಿಗೆ ಪದಾಧಿಕಾರಿಗಳ ನೇಮಕ ವಿಳಂಬವಾಗುತ್ತಿದೆ. ಈಗಾಗಲೇ ಕೆಪಿಸಿಸಿ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರನ್ನು ನೇಮಿಸಲು ಕಾಂಗ್ರೆಸ್ ಹೈಕಮಾಂಡ್ ತಿಂಗಳುಗಳ ಹಿಂದೆಯೇ ಸಮ್ಮತಿ ಸೂಚಿಸಿದೆ. ಆದರೆ, ರಾಜ್ಯ ನಾಯಕರು ಇಲ್ಲಿನ ಒತ್ತಡ ಕಂಡು ಸುಮ್ಮನಿರುವ ಸ್ಥಿತಿ ಎದುರಾಗಿದೆ. ಒಂದೆಡೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರ್ ನಾಥ್ ಅವಧಿ ಕೂಡ ಮುಗಿಯುತ್ತಿದೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಇವರನ್ನು ನೇಮಿಸಿದ್ದರು.
ಡಿಕೆಶಿ ಯತ್ನಕ್ಕೆ ಹಿನ್ನಡೆ
ಈಗಾಗಲೇ ಒಂದೆರಡು ಸಾರಿ ದಿಲ್ಲಿಗೆ ತೆರಳಿ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಿಕೊಂಡು ಬರುವ ಡಿಕೆಶಿ ಯತ್ನಕ್ಕೆ ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕಾರ್ಯಕರ್ತರು, ಮುಖಂಡರ ಉತ್ಸಾಹ ಕಡಿಮೆ ಆಗುತ್ತಿದೆ. ಕೆಪಿಸಿಸಿ ಪದಾಧಿಕಾರಿಗಳ ನೇಮಕದಲ್ಲಿ ಎದುರಾಗಿರುವ ವಿಳಂಬ ಪಕ್ಷದ ಪ್ರತಿ ಚಟುವಟಿಕೆ ಹಾಗೂ ಬೆಳವಣಿಗೆಯನ್ನು ನಿಯಂತ್ರಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಇದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಅರೆಹುಚ್ಚ: ಶಾಸಕ ರೇಣುಕಾಚಾರ್ಯ ಕಿಡಿ