ಬೆಂಗಳೂರು: ಕುಡಿದ ನಶೆಯಲ್ಲಿ ರಾತ್ರಿ ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದು ಹುಚ್ಚಾಟ ಮೆರೆದಿದ್ದ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿದ್ಯಾರ್ಥಿಗಳು ಬಿಹಾರ ಮತ್ತು ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿರುವ ಇವರು ಕಳೆದ ಶುಕ್ರವಾರ ಮದ್ಯದ ಮತ್ತಿನಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದಿದ್ದರು.
ಬರ್ತ್ಡೇ ಆಚರಣೆಗೆ ತೆರಳಿದ್ದರು:
ಬಂಧಿತರು ರಾಜರಾಜೇಶ್ವರಿ ನಗರದ ಕೃಷ್ಣಾ ಗಾರ್ಡನ್ನ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದ ಸ್ನೇಹಿತನ ಬರ್ತ್ಡೇ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ತೆರಳಿದ್ದರು. ರಾತ್ರಿ 2 ಗಂಟೆ ವೇಳೆಗೆ ಪಾರ್ಟಿ ಮುಗಿಸಿ ಬರುವಾಗ ಮದ್ಯದ ನಶೆಯಲ್ಲಿ ಬ್ಯಾಟ್ನಿಂದ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದಿದ್ದರು. ರಾಜರಾಜೇಶ್ವರಿ ನಗರ ಹಾಗೂ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ 12 ಕಾರುಗಳ ಗಾಜು ಜಖಂ ಮಾಡಿದ್ದರು.
ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಬಂಧಿತರಲ್ಲಿ ಮೂವರು ಸ್ಥಳೀಯ ಅಪಾರ್ಟ್ಮೆಂಟ್ ಹಾಗೂ ಮತ್ತಿಬ್ಬರು ಹಾಸ್ಟೆಲ್ನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಗಾಜು ಪುಡಿಗಟ್ಟಿ ಪುಂಡರ ಹುಚ್ಚಾಟ