ಬೆಂಗಳೂರು: ಟ್ರಿನಿಟಿ ಸರ್ಕಲ್ ಬಳಿಯಿರುವ ಅಜಂತಾ ಟ್ರಿನಿಟಿ ಹೋಟೆಲ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, 2 ಮಹಡಿಯಲ್ಲಿದ್ದ ವಸ್ತುಗಳು ಭಸ್ಮವಾಗಿವೆ. ನಿನ್ನೆ ರಾತ್ರಿ 10.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡದಿಂದ, ಇಡೀ ಹೋಟೆಲ್ಗೆ ಜ್ವಾಲೆ ಆವರಿಸಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ, ಹೋಟೆಲ್‌ನಲ್ಲಿ ತಂಗಿದ್ದ ನಾಗೇಶ್, ಮಹೇಂದ್ರ, ಸತ್ಯಪ್ರಕಾಶ್, ದಿನೇಶ್ ಹಾಗೂ ಅಭಿಷೇಕ್ ಅವರನ್ನು ರಕ್ಷಿಸಿದರು.
ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ರಾಜಪ್ಪ ಹಾಗೂ ಸುರೇಶ್ ಎಂಬುವರು ಎರಡನೇ ಮಹಡಿಯಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಪಾರ್ಕಿಂಗ್ ಲಾಟ್ನಲ್ಲಿದ್ದ ಒಂದು ಆಟೋ, ಒಂದು ಬೊಲೆರೊ ವಾಹನ ಸುಟ್ಟು ಕರಕಲಾಗಿರುವುದರಿಂದ ಮೊದಲು ಬೊಲೆರೊ ವಾಹನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಬೊಲೆರೊ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಪಕ್ಕದಲ್ಲೇ ಇದ್ದ ಆಟೋಗೆ ತಗುಲಿರಬಹುದು. ಬಳಿಕ ಕಟ್ಟಡಕ್ಕೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ವೈರ್ಗೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಇದರಿಂದ ಶಾರ್ಟ್ ಸರ್ಕ್ಯೂಟ್ ಆಗಿ ಇಡೀ ಹೋಟೆಲ್ ಅಗ್ನಿಗಾಹುತಿಯಾಗಿದೆ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಘಟನೆಯಲ್ಲಿ ಇಡೀ ಹೋಟೆಲ್ ಸುಟ್ಟು ಕರಕಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಭಸ್ಮವಾಗಿವೆ. ಈ ಕುರಿತು ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.