ಬೆಂಗಳೂರು: ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಧನಬಲವುಳ್ಳವರಿಗೆ ರಾಜಕೀಯ ಪಕ್ಷಗಳು ಮಣೆ ಹಾಕುತ್ತಿದ್ದು, ಹಣ ಬಲವಿರುವ ರಾಜಕೀಯ ಪಕ್ಷಗಳ ನಾಯಕರ ಮಕ್ಕಳು, ಕುಟುಂಬ ಸದಸ್ಯರು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ನಡೆಯುತ್ತಿರುವ ಚುನಾವಣೆಯಲ್ಲಿ ಈ ಬಾರಿ ಹಣದ ಹೊಳೆ ಹರಿಯುವ ಲಕ್ಷಣಗಳು ಗೋಚರಿಸಿವೆ. ಹಿರಿಯರ ಮನೆ, ಚಿಂತಕರ ಚಾವಡಿ ಎಂದೇ ಕರೆಯಲ್ಪಡುವ ವಿಧಾನ ಪರಿಷತ್ತು ಮತ್ತೊಮ್ಮೆ ಶ್ರೀಮಂತರು, ರಾಜಕಾರಣಿಗಳ ಮಕ್ಕಳು, ಕುಟುಂಬ ಸದಸ್ಯರಿಂದ ತುಂಬಿ ತುಳುಕಲು ಸಜ್ಜಾಗಿದೆ. ಮೇಲ್ಮನೆಯ ಹಿರಿಮೆ, ಗರಿಮೆಗೆ ಈ ಬೆಳವಣಿಗೆ ಮರ್ಮಾಘಾತ ನೀಡಿದೆ.
ಚುನಾವಣೆಗೆ ಸ್ಪರ್ಧಿಸುವವರ ಖಾತೆಯಲ್ಲಿ ಕನಿಷ್ಠ 15 ರಿಂದ 20 ಕೋಟಿ ಹಣ ಇರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ವತಃ ಘೋಷಣೆ ಮಾಡಿದ್ದು, ಯಥೇಚ್ಛವಾಗಿ ವೆಚ್ಚ ಮಾಡುವವರಿಗೆ ಟಿಕೆಟ್ ನೀಡಲಾಗುತ್ತಿದೆ. ಇದೇ ಕಾರಣದಿಂದಾಗಿ ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆಯ ಕಗ್ಗಂಟು ತಲೆ ದೋರಿತ್ತು.
ಬಿಜೆಪಿ ಕಥೆಯೂ ಸಹ ಇದೇ ಆಗಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ಇರುವ ಹಿನ್ನೆಲೆಯಲ್ಲಿ ಹಣಕ್ಕೆ ಯಾವುದೇ ಕೊರತೆ ಇಲ್ಲ. ಪಕ್ಷದ ವರಿಷ್ಠರು ಸಹ ಅಳೆದು ತೂಗಿ ಮಣೆ ಹಾಕಿದ್ದಾರೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನೀಡಲಾಗುತ್ತಿದೆ. ಈ ಹಿಂದೆ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿದ್ದ ಬಿಜೆಪಿ ಈ ಬಾರಿ ಇದಕ್ಕೆ ತದ್ವಿರುದ್ಧವಾಗಿ ಸ್ಥಿತಿವಂತರನ್ನೇ ಆಯ್ಕೆ ಮಾಡಿದೆ.
ಶ್ರೀಮಂತ ವ್ಯಕ್ತಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳನ್ನು ನಡೆಸುವವರು, ಸಹಕಾರಿ ಕ್ಷೇತ್ರದ ಧುರೀಣರಿಗೆ ಎಲ್ಲಾ ಪಕ್ಷಗಳಲ್ಲೂ ವಿಫುಲ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ಮತ ಪಡೆಯಲು ಇಂತಿಷ್ಟು ಎಂದು ನಿಗದಿ ಮಾಡಿದ್ದು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರತಿ ಮತ ಕನಿಷ್ಠ 20 ರಿಂದ 30 ಸಾವಿರ ರೂಗೆ ಮಾರಾಟವಾಗುವ ನಿರೀಕ್ಷೆಯಿದೆ. ಇದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿ ಕನಿಷ್ಠ 20 ರಿಂದ 30 ಕೋಟಿ ರೂ ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ಕುಟುಂಬ ರಾಜಕಾರಣಕ್ಕೆ ಆದ್ಯತೆ:
ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಲಾಗಿದೆ. ಜೆಡಿಎಸ್‌ನಲ್ಲಿ ಹೆಚ್.ಡಿ. ರೇವಣ್ಣ ಪುತ್ರ ಡಾ.ಸೂರಜ್ ರೇವಣ್ಣ ಕಣಕ್ಕಿಳಿದಿದ್ದಾರೆ. ರೇವಣ್ಣ ಅವರ ತಂತ್ರಗಾರಿಕೆಯಿಂದ ಸೂರಜ್ ಚುನಾವಣಾ ಅಖಾಡ ಪ್ರವೇಶಿಸಿದ್ದಾರೆ. ಗೌಡ ಅಂಡ್ ಸನ್ಸ್ ಎಂಬ ಟೀಕೆ ಇದೀಗ ಸ್ಪಲ್ಪ ಬದಲಾವಣೆಯಾಗಿದ್ದು, ಗೌಡ ಅಂಡ್ ಗ್ರ್ಯಾಂಡ್ ಸನ್ಸ್ ಆಗಿದೆ.
ದೊಡ್ಡಗೌಡರ ಮೂರನೇ ತಲೆಮಾರಿನ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಂತಾಗಿದೆ. ದೇವೇಗೌಡರು ರಾಜ್ಯಸಭಾ ಸದಸ್ಯರು, ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಸದಸ್ಯ, ನಿಖಿಲ್ ಕುಮಾರ ಸ್ವಾಮಿ ಮಂಡ್ಯ ಲೋಕಸಭೆಗೆ ಸ್ಪರ್ಧಿಸಿ ಪರಾಭವೊಗೊಂಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ, ಪತ್ನಿ ಅನಿತಾ ಕುಮಾರಸ್ವಾಮಿ ರಾಮನಗರ ಕ್ಷೇತ್ರದ ಶಾಸಕಿ, ಹೆಚ್.ಡಿ. ರೇವಣ್ಣ ಹೊಳೆ ನರಸೀಪುರ ಪ್ರತಿನಿಧಿಸಿದರೆ ಪತ್ನಿ ಭವಾನಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದವರು, ಭವಾನಿ ರೇವಣ್ಣ ಅವರೊಬ್ಬರು ಶಾಸಕರಾದರೆ ಬಹುತೇಕ ಕುಟುಂಬ ರಾಜಕಾರಣದಲ್ಲಿ ತೊಡಗಿದಂತಾಗುತ್ತದೆ.
ಶಿವಮೊಗ್ಗದಲ್ಲಿ ಮಾಜಿ ಸಭಾಪತಿ, ಹಿರಿಯ ಮುಖಂಡ ಡಿ.ಎಚ್.ಶಂಕರಮೂರ್ತಿ ಪುತ್ರ ಡಿ.ಎಸ್.ಅರುಣ್ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ವೀರಶೈವ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಇವರು ಇದೀಗ ಚುನಾವಣಾ ರಾಜಕೀಯ ಪ್ರವೇಶಿಸಿದ್ದಾರೆ. ಈ ಮೂಲಕ ಶಿವಮೊಗ್ಗದಲ್ಲಿ ಮೂರನೇ ಕುಟಂಬ ತನ್ನ ಕುಡಿಯನ್ನು ರಾಜಕೀಯ ಪ್ರವೇಶ ಮಾಡಿದೆ.
ಧಾರವಾಡದಲ್ಲಿ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ. ವಿಜಾಪುರ-ಬಾಗಲಕೋಟೆಗೆ ಎಂ.ಬಿ.ಪಾಟೀಲ್ ಸಹೋದರ ಸುನೀಲ್ ಗೌಡ ಪಾಟೀಲ್, ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಧಿಸಿದ್ದ ಎ.ಮಂಜು ಪುತ್ರ ಮಂಥರ್ ಗೌಡ ಕಾಂಗ್ರೆಸ್ ನಿಂದ ಕೊಡಗು ಕ್ಷೇತ್ರಕ್ಕೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅಕ್ಕನ ಮಗ ಎಸ್. ರವಿ ಹೀಗೆ ಹಲವು ಮಂದಿ ಕಣಕ್ಕಿಳಿದಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವರು ಕೋಟ್ಯಧಿಪತಿಗಳ ಪ್ರತ್ಯೇಕ ಗುಂಪು. ಅತ್ಯಂತ ಶ್ರೀಮಂತರು ಇದನ್ನು ಅಧಿಕಾರಕ್ಕೆ ಶಾರ್ಟ್‌ಕಟ್ ಎಂದು ನೋಡುತ್ತಾರೆ. ಈ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತದಾರರಿಗೆ ಹಣ ಮತ್ತು ಉಡುಗೊರೆಗಳನ್ನು ಅಡೆತಡೆಯಿಲ್ಲದೆ ಹರಿಯಬಿಡಲಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅತಿ ಹೆಚ್ಚು ಲಾಭ ಗಳಿಸಬಹುದಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.