ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ಕಾಲೇಜುಗಳು ತಡವಾಗಿ ಆರಂಭವಾಗಿರುವುದರಿಂದ ತರಗತಿಗಳ ದಾಖಲಾತಿಯನ್ನು ಫೆ.20ರವರೆಗೆ ವಿಸ್ತರಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಆದೇಶಿಸಿದ್ದಾರೆ.
ಪ್ರಸ್ತುತ ಶೈಕ್ಷಣಿಕ ವರ್ಷ ಶಾಲಾ-ಕಾಲೇಜುಗಳು ಫೆ. 1ರಿಂದ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡಿವೆ. 9 ರಿಂದ 12ನೇ ತರಗತಿವರೆಗೆ ಭೌತಿಕ ತರಗತಿಗಳು ಆರಂಭವಾಗಿದ್ದರೆ, ಉಳಿದ ತರಗತಿಗಳು ಪರ್ಯಾಯ ಬೋಧನೆಯಲ್ಲಿ ನಡೆಯುತ್ತಿವೆ. ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ತಾವು ಬಯಸಿದ ಕಾಲೇಜುಗಳಲ್ಲಿ ದಾಖಲಾತಿ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ವರ್ಷದ ದಾಖಲಾತಿಗೆ ಫೆ.6 ಕಡೆಯ ದಿನವಾಗಿದ್ದು, ಹಲವಾರು ವಿದ್ಯಾರ್ಥಿಗಳು ಇನ್ನೂ ತರಗತಿಗಳಿಗೆ ದಾಖಲಾಗಲು ಸಾಧ್ಯವಾಗಿಲ್ಲ. ತರಗತಿಗಳು ತಡವಾಗಿ ಪ್ರಾರಂಭವಾಗಿರುವುದರಿಂದ ದಾಖಲಾತಿಗೆ ಇನ್ನಷ್ಟು ಸಮಯ ನೀಡಬೇಕೆಂದು ಕೋರಿ ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಪೋಷಕರು ಮತ್ತು ಜನಪ್ರತಿನಿಧಿಗಳಿಂದ ಪ್ರಸ್ತಾವನೆಗಳು ಸ್ವೀಕೃತವಾಗಿದ್ದವು.
ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಾಖಲಾತಿಯನ್ನು ಫೆ. 20ರವರೆಗೆ ವಿಸ್ತರಿಸಬೇಕೆಂದು ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಆದೇಶ ನೀಡಿದ್ದಾರೆ.
ಓದಿ: ಶಾಲಾ ಶುಲ್ಕ ಸಮಸ್ಯೆ ಪರಿಹಾರಕ್ಕೆ ಸಮಿತಿಗಳ ರಚನೆ: ಶಿಕ್ಷಣ ಸಚಿವ ಸುರೇಶ್ ಕುಮಾರ್