ಬೆಂಗಳೂರು : ರಾಜ್ಯದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಅಬಕಾರಿ ಇಲಾಖೆ ಕೂಡ ಮುಂದಾಗಿದೆ.
ಕೊರೊನಾ ಪರಿಣಾಮದಿಂದ ರಾಜ್ಯದ ಪ್ರತಿಯೊಬ್ಬರೂ ಸ್ಯಾನಿಟೈಸರ್ ಉಪಯೋಗಿಸುವಂತಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಇರುವುದರಿಂದ ಸಹಜವಾಗಿ ಸ್ಯಾನಿಟೈಸರ್ಗಳಿಗೆ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬೀಳುತ್ತಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ದಂಧೆಕೋರರು ಕಳಪೆ ಗುಣಮಟ್ಟದ ಸ್ಯಾನಿಟೈಸರ್ ಉತ್ಪಾದಿಸಿ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಅಡ್ಡೆ ಮೇಲೆ ಇತ್ತೀಚೆಗಷ್ಟೇ ಸಿಸಿಬಿ ದಾಳಿ ನಡೆಸಿ ಲಕ್ಷಾಂತರ ರೂ.ಮೌಲ್ಯದ ನಕಲಿ ಸ್ಯಾನಿಟೈಸರ್ ವಶಕ್ಕೆ ಪಡೆದುಕೊಂಡಿದ್ದರು. ಈ ಹಿನ್ನೆಲೆ ಸುಲಭವಾಗಿ ಹಾಗೂ ಗುಣಮಟ್ಟದಲ್ಲಿ ಸ್ಯಾನಿಟೈಸರ್ ಸಿಗುವಂತೆ ಮಾಡಲು ಅಬಕಾರಿ ಇಲಾಖೆಯು ಮಾದಕ ವಸ್ತು ನಿಯಂತ್ರಣ ಇಲಾಖೆಯಿಂದ ಅನುಮತಿ ಪಡೆದು ಕಳೆದ ಒಂದು ವಾರದಿಂದ 65 ಸಾವಿರ ಲೀಟರ್ ಸ್ಯಾನಿಟೈಸರ್ ಉತ್ಪಾದನೆ ಮಾಡಿ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೆ ಉಚಿತವಾಗಿ ಹಂಚಿದೆ.