ಬೆಂಗಳೂರು: ಮಹಿಳೆ ಕೊಲ್ಲಲು ಯತ್ನಿಸಿದ ಆರೋಪ ಪ್ರಕರಣದಲ್ಲಿ ಮಾಜಿ ಪೊಲೀಸ್ ಕಾನ್ಸ್ಟೇಬಲ್ಗೆ ನಗರದ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ವಜಾಗೊಂಡು ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿರುವ ಕೊಡಗಿನ ಕುಶಾಲನಗರದ ಅನಿಲ್ ಕುಮಾರ್ ಅಲಿಯಾಸ್ ರಾಹುಲ್ ಶಿಕ್ಷೆಗೆ ಒಳಗಾಗಿರುವ ಮಾಜಿ ಪೊಲೀಸ್ ಕಾನ್ಸ್ಟೇಬಲ್. ಈತನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನಗರದ 66ನೇ ಹೆಚ್ಚುವರಿ ಸಿಸಿಎಚ್ ನ್ಯಾಯಾಲಯ 5 ವರ್ಷ ಜೈಲು ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಏನಿದು ಪ್ರಕರಣ: ಮದುವೆಯಾಗಿ ಒಂದು ಮಗುವಿನ ತಂದೆಯಾಗಿದ್ದ ಅನಿಲ್ ಕುಮಾರ್ 2008ರಲ್ಲಿ ಬ್ಯೂಟಿಷಿಯನ್ವೊಬ್ಬರನ್ನು ಪರಿಚಯ ಮಾಡಿಕೊಂಡು, ಬಳಿಕ ಪ್ರೀತಿಸುವುದಾಗಿ ತಿಳಿಸಿದ್ದ. ಯುವತಿ ಸಮ್ಮತಿಯಿತ್ತಾದರೂ ಮದುವೆಯಾಗಿದ್ದಾನೆ ಎಂಬ ವಿಚಾರ ತಿಳಿದ ಬಳಿಕ ದೂರವಿಡಲು ಮುಂದಾಗಿದ್ದರು. ಈ ಕುರಿತು ಇಬ್ಬರ ನಡುವೆ ಮನಸ್ತಾಪ ಉಂಟಾದ ಸಂದರ್ಭದಲ್ಲಿ ತಾನೀಗಾಗಲೇ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದೇನೆಂದು ತಿಳಿಸಿ ಮನವೊಲಿಸಿದ್ದ.
ಕೆಲ ಸಮಯದ ಬಳಿಕ ಆತ ಪೊಲೀಸ್ ಇಲಾಖೆಯಿಂದ ವಜಾಗೊಂಡಿದ್ದಾನೆ ಹಾಗೂ ಮೊದಲ ಪತ್ನಿಗೂ ವಿಚ್ಛೇದನ ನೀಡಿಲ್ಲ ಎಂಬುದು ತಿಳಿದಾಗ ಆತನನ್ನು ಸಂಪೂರ್ಣ ದೂರವಿಟ್ಟಿದ್ದಳು. ಜತೆಗೆ 2011ರ ನವೆಂಬರ್ 20ರಂದು ತನ್ನ ತಂಟೆಗೆ ಬರದಂತೆ ಎಚ್ಚರಿಕೆ ನೀಡಲು ಸ್ನೇಹಿತ ನವೀನ್ ಎಂಬುವರ ಜೊತೆ ಅನಿಲ್ ವಾಸಿಸುತ್ತಿದ್ದ ನ್ಯಾಯಾಂಗ ಬಡಾವಣೆಯ ಮನೆಗೆ ಹೋಗಿದ್ದಳು. ಇದೇ ವಿಚಾರವಾಗಿ ಚರ್ಚಿಸೋಣ ಎಂದು ಮನೆಯ ಟೆರೇಸ್ ಮೇಲೆ ಕರೆದೊಯ್ದ ಅನಿಲ್, ಯುವತಿಯ ಎದೆ, ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ 10 ಬಾರಿ ಇರಿದು ಕೊಲ್ಲಲು ಯತ್ನಿಸಿದ್ದ. ರಕ್ಷಣೆಗೆ ಮುಂದಾದ ನವೀನ್ ಮೇಲೂ ಹಲ್ಲೆ ಮಾಡಿದ್ದ.
ಇದನ್ನೂ ಓದಿ: ಧರಣಿ ನಿರತ ಡಿಕೆಶಿ ಭೇಟಿಯಾದ ಸ್ಪೀಕರ್ ಕಾಗೇರಿ.. ಹಳೆ ಘಟನೆ ಮೆಲಕು ಹಾಕಿದ ನಾಯಕರು
ಈ ವೇಳೆ ಸ್ಥಳಕ್ಕೆ ಧಾವಿಸಿದ ಯಲಹಂಕ ಠಾಣೆ ಪೊಲೀಸರು ಗಾಯಾಳು ಯುವತಿಯನ್ನು ರಕ್ಷಿಸಿದ್ದರು. ಬಳಿಕ, ಎಫ್ಐಆರ್ ದಾಖಲಿಸಿಕೊಂಡು ಆರೋಪಿ ಅನಿಲ್ ಕುಮಾರ್ನನ್ನು ಬಂಧಿಸಿದ್ದರು. 2012ರಲ್ಲಿ ಜಾಮೀನು ಪಡೆದು ಹೊರ ಬಂದ ನಂತರವೂ ಯುವತಿಗೆ ಬೆದರಿಕೆ ಹಾಕಿ, ನೀನು ನನಗಷ್ಟೇ ಸೇರಬೇಕು. ಬಿಟ್ಟು ಹೋದರೆ ಕೊಲ್ಲುವುದಾಗಿ ಹೆದರಿಸಿದ್ದಾನೆ ಎಂದು ಯುವತಿ ವಿಚಾರಣೆ ವೇಳೆ ತಿಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.