ಬೆಂಗಳೂರು : ಬಿಜೆಪಿ ಅಧಿಕಾರಕ್ಕೆ ಬಂದು ಏನು ದೊಡ್ಡ ಕೆಲಸ ಮಾಡಿದೆ?. ಮೊದಲು ಜನರ ಕಷ್ಟಕ್ಕೆ ಸ್ಪಂದಿಸಿ. ಮೈಮರೆಯುವ ಕೆಲಸ ಮಾಡಬಾರದು ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮೆರಿಕದಲ್ಲಿ ಲಸಿಕೆ ತೆಗೆದುಕೊಂಡಿರುವುದಕ್ಕೆ ಮಾಸ್ಕ್ ತೆಗೀರಿ ಅಂದರು. ಆದರೆ, ಅಲ್ಲಿ ಕೋವಿಡ್ ಹೆಚ್ಚಳವಾಯಿತು. ಹಾಗಾಗಿ, ತಜ್ಞರ ಅಭಿಪ್ರಾಯ ಪಡೆದು, ರಾಜ್ಯದ ಜನತೆಗೆ ಒಳ್ಳೆಯದು ಮಾಡಲು ಏನು ಬೇಕೋ ಅದನ್ನು ಮಾಡಿ ಎಂದು ಹೇಳಿದರು.
ಕೋವಿಡ್ ಮೂರನೇ ಅಲೆ ಬಂದಿದ್ದು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವಂತೆ ಆಗಬೇಕು. ಇಲ್ಲದಿದ್ದರೆ ಏನೇ ವೈಫಲ್ಯ ಆದರೂ ಸರ್ಕಾರವೇ ನೇರ ಹೊಣೆಯಾಗಲಿದೆ. ಕೊರೊನಾ ಮೊದಲ ಅಲೆಯಲ್ಲಿ ರಾಷ್ಟ್ರದಲ್ಲಿ 500 ಕೇಸ್ ಬಾರದಿದ್ದರೂ ದೇಶವನ್ನೇ ಬಂದ್ ಮಾಡಲಾಯಿತು. ಈಗ ಲಕ್ಷಾಂತರ ಕೇಸ್ ಬರ್ತಿದೆ. ವೀಕೆಂಡ್, ನೈಟ್ ಕರ್ಫ್ಯೂ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕೊರೊನಾ ಅಂದರೆ ಭಯ ಪಡುವಂತಾಗಿದೆ. ಭಯ ಪಡಬೇಡಿ ಅಂತ ಹೇಳುವವರೇ ಇಲ್ಲ. ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ. ತೊಂದರೆ ಆಗಿದೆ ಅಂತ ಕೆಲವರು ಹೇಳುತ್ತಿದ್ದಾರೆ. ಅವರು ಸರ್ಕಾರಕ್ಕೆ ಸಹಕಾರ ನೀಡಬೇಕು. ಜನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ತಜ್ಞರ ಬಳಿ ಸಲಹೆ ಪಡೆದು ಇನ್ನಷ್ಟು ದಿನ ಕಠಿಣ ಕ್ರಮ ಮುಂದುವರೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.