ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಸದ್ಯದಲ್ಲೇ ಚುನಾವಣಾ ವೇಳಾಪಟ್ಟಿ ಪ್ರಕಟಿಸುವುದಾಗಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
ಗ್ರಾ.ಪಂ ಗಳಿಗೆ ಚುನಾವಣೆ ನಡೆಸಲು ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ಕೆ.ಸಿ. ಕೊಂಡಯ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಅವರು ಪೀಠಕ್ಕೆ ಲಿಖಿತ ಮಾಹಿತಿ ಸಲ್ಲಿಸಿದರು.
ಅದರಂತೆ, ರಾಜ್ಯದ 5,800 ಗ್ರಾಮ ಪಂಚಾಯಿತಿಗಳ ಅಂತಿಮ ಮೀಸಲು ಪಟ್ಟಿಯನ್ನು ಆ.27ರಂದು ಪ್ರಕಟಿಸಲಾಗಿದೆ. ಆ.31ರಂದು ಎಲ್ಲ ಗ್ರಾಮ ಪಂಚಾಯಿತಿಗಳ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣೆ ಹಮ್ಮಿಕೊಳ್ಳಲು ವಿಶೇಷ ಎಸ್‍ಒಪಿ ರೂಪಿಸಲಾಗಿದೆ. ಮೀಸಲು ಪ್ರಕಟಿಸಿದ 45 ದಿನಗಳ ಬಳಿಕ ಚುನಾವಣಾ ದಿನಾಂಕ ಹೊರಡಿಸಬೇಕಾಗುತ್ತದೆ. ಆ.27ರಂದು ಮೀಸಲು ಪ್ರಕಟಿಸಿದ್ದು, ಅದರಂತೆ ಅ.10ಕ್ಕೆ 45 ದಿನ ಆಗಲಿದೆ. ಆ ಬಳಿಕ ಯಾವುದೇ ವಿಳಂಬವಿಲ್ಲದೇ ಚುನಾವಣಾ ದಿನಾಂಕ ಪ್ರಕಟಿಸಿ, ಆದಷ್ಟು ಬೇಗ ಚುನಾವಣೆ ನಡೆಸಲಾಗುವುದು ಎಂದು ಆಯೋಗ ತನ್ನ ಲಿಖಿತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಹಣ ಬಿಡುಗಡೆಗೆ ಸೂಚನೆ :
ಇನ್ನು ವಿಚಾರಣೆ ವೇಳೆ ಆಯೋಗದ ಪರ ವಕೀಲರು ಪೀಠಕ್ಕೆ ವಿವರಿಸಿ, ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು 210 ಕೋಟಿ ಕೇಳಲಾಗಿತ್ತು. ಆದರೆ, ಸರ್ಕಾರ 125 ಕೋಟಿ ರೂ. ಮಂಜೂರು ಮಾಡಿದೆ. ಈ ಮೊತ್ತ ಸಾಕಾಗುವುದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ, ಚುನಾವಣೆ ನಡೆಸುವುದು ಒಂದು ಸಾಂವಿಧಾನಿಕ ಹೊಣೆಗಾರಿಕೆ. ಈ ರೀತಿ ಸಾಂವಿಧಾನಿಕ ಜವಾಬ್ದಾರಿ ನಿರ್ವಹಿಸುವ ಸಾಂವಿಧಾನಿಕ ಸಂಸ್ಥೆಯ ಹಣಕಾಸಿನ ಪ್ರಸ್ತಾವನೆ ಬಗ್ಗೆ ಸರ್ಕಾರ ಈ ರೀತಿ ನಡೆದುಕೊಳ್ಳುವುದು ಉಚಿತವಲ್ಲ. ಆದ್ದರಿಂದ ಆಯೋಗ ಪ್ರಸ್ತಾವನೆ ಇಟ್ಟಿರುವ ಪೂರ್ಣ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಆಕ್ಟೋಬರ್ 9ಕ್ಕೆ ಮುಂದೂಡಿತು.