ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಬಳಿಕ ಶಾಲೆಗಳಿಗೆ ಮಕ್ಕಳ ಮರು ದಾಖಲಾತಿಯಾಗುತ್ತಿರುವ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಹೀಗಾಗಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯ ನಿಯಮ ಪ್ರಕಾರ ಮಕ್ಕಳನ್ನು ಮುಂದಿನ ತರಗತಿಗಳಿಗೆ ಮರು ದಾಖಲಾತಿ ಮಾಡುವುದು ಪೋಷಕರ ಕರ್ತವ್ಯವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲು ಮಾಡಲು ಮುಂದಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇಂದು ರಾಜ್ಯದ ವಿವಿಧ ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳೊಂದಿಗೆ ಶಾಲಾ ಮಂಡಳಿಗಳು, ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಉಪಕ್ರಮಗಳ ಕುರಿತು ಚರ್ಚಿಸಿದ ಅವರು, ಪೋಷಕರು ತಮ್ಮ ಮಕ್ಕಳನ್ನು ತಮ್ಮ ಮಕ್ಕಳು ಓದಿದ ಶಾಲೆ ಇಲ್ಲವೇ ತಮಗೆ ಅನುಕೂಲವಾದ ಶಾಲೆಗಳಲ್ಲಿ ಮರು ದಾಖಲಾತಿಗೊಳಿಸಲು ಕ್ರಮ ವಹಿಸಬೇಕು ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮುಂದಿನ ತರಗತಿಗೆ ದಾಖಲಾತಿ ಮಾಡದೇ ಇರುವುದು ಪರಿಹಾರವಾಗುವುದಿಲ್ಲ. ಇದು ಮಕ್ಕಳ ಹಕ್ಕಿನ ಕಸಿತವೂ ಆಗುತ್ತದೆ. ತಮ್ಮ ಮಕ್ಕಳನ್ನು ಮರು ದಾಖಲಾತಿ ಮಾಡುವುದರಿಂದ ರಾಜ್ಯದ ಶಾಲೆಗಳಲ್ಲಿ ತರಗತಿವಾರು ಮಕ್ಕಳ ದಾಖಲಾತಿ ಸಂಖ್ಯೆ ಲೆಕ್ಕಕ್ಕೆ ದೊರೆಯಲಿದ್ದು, ಅದು ಮುಂದಿನ ತರಗತಿಗಳಿಗೆ ಮಕ್ಕಳನ್ನು ಉತ್ತೀರ್ಣಗೊಳಿಸಲು ಅನುವಾಗಲಿದೆ. ಮಕ್ಕಳ ಮರು ದಾಖಲಾತಿಗೆ ಎರಡು ಬಾರಿ ಸಮಯ ವಿಸ್ತರಿಸಲಾಗಿತ್ತು. ಆದರೂ ಕೆಲ ಪೋಷಕರು ತಮ್ಮ ಮಕ್ಕಳನ್ನು ಮುಂದಿನ ತರಗತಿಗಳಿಗೆ ಇನ್ನೂ ಮರು ದಾಖಲಾತಿ ಮಾಡದಿರುವುದಕ್ಕೆ ಕೋವಿಡ್ ಸಾಂಕ್ರಾಮಿಕ ಒಂದು ನೆಪವಾಗಬಾರದು ಎಂದರು.
ಓದಿ...ಶಾಲಾ ಶಿಕ್ಷಣದಲ್ಲಿ ಹೊಸ ಶಕೆ: ಸಚಿವ ಸುರೇಶ್ ಕುಮಾರ್
ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಮಕ್ಕಳ ಹಿತದೃಷ್ಟಿಯಿಂದ ಶಾಲಾ ಶುಲ್ಕ ಹೆಚ್ಚಳ ಮಾಡದಿರುವ ಮತ್ತು ಸಾಧ್ಯವಾದಷ್ಟು ಶುಲ್ಕ ಇಳಿಸುವಂತಹ ಮತ್ತು ಶುಲ್ಕ ಪಾವತಿಸಲು ಕಂತುಗಳನ್ನು ನೀಡುವಂತಹುದು ಸೇರಿದಂತೆ ಮಾನವೀಯ ನಿಲುವುಗಳನ್ನು ಕೈಗೊಳ್ಳಲು ಹಿಂಜರಿಯಬಾರದು. ಶಾಲಾ ಶುಲ್ಕ ನಿಗದಿ ವಿಚಾರದಲ್ಲಿ ಮಕ್ಕಳ ಪೋಷಕರೊಂದಿಗೆ ಚರ್ಚಿಸಿ ಶಾಲಾ ಸಂಘಟನೆಗಳು ಅವರ ವಿಶ್ವಾಸವನ್ನೂ ಪಡೆದುಕೊಂಡು ಶೀರ್ಘ ಒಂದು ನಿರ್ಧಾರಕ್ಕೆ ಬಂದು ಸರ್ಕಾರಕ್ಕೆ ತಿಳಿಸಿದಲ್ಲಿ ಈ ಸಂಬಂಧ ಶಾಲಾ ಶುಲ್ಕ ನಿಗದಿ ಕುರಿತಂತೆ ಸರ್ಕಾರವು ಒಂದು ನಿರ್ಧಾರಕ್ಕೆ ಬರಲು ಅನುಕೂಲವಾಗಲಿದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ಆರೋಗ್ಯ ಇಲಾಖೆಯೊಂದಿಗೆ ಶಾಲೆಗಳನ್ನು ತೆರೆಯುವ ಸಂಬಂಧದಲ್ಲಿ ಶೀಘ್ರವೆ ಚರ್ಚೆ ನಡೆಸಲಾಗುವುದು. ಕೋವಿಡ್ ನಿಯಮಗಳನ್ನು ಪಾಲಿಸಿ 10 ರಿಂದ 12ನೇ ತರಗತಿಗಳನ್ನು ಆರಂಭಿಸುವ ದೃಷ್ಟಿಯಿಂದ ಮುಖ್ಯಮಂತ್ರಿಗಳೊಂದಿಗೆ ಶೀಘ್ರದಲ್ಲೇ ವಿವಿಧ ಇಲಾಖೆಗಳ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ವಿವಿಧ ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಮುಖ್ಯಸ್ಥರು, ಪ್ರಾಚಾರ್ಯರು, ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.