ಬೆಂಗಳೂರು: ಯಾವುದೇ ದೇಶ ಅಥವಾ ರಾಜ್ಯಗಳ ಸರ್ವಾಂಗೀಣ ಬೆಳವಣಿಗೆಗೆ ಆರ್ಥಿಕ ಶಿಸ್ತು ಅಗತ್ಯವಾಗಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಾದಿಸಿದ್ದಾರೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶತಮಾನೋತ್ಸವ ಸಮಾರಂಭದಲ್ಲಿ ದೇಶದ ಅಭಿವೃದ್ಧಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪಾತ್ರದ ವಿಷಯದ ಕುರಿತು ತಮ್ಮ ವಿಚಾರಧಾರೆ ಮಂಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ದೇಶ, ರಾಜ್ಯಗಳ ಅಭಿವೃದ್ಧಿಯಲ್ಲಿ ಸಹಭಾಗಿಯಾಗಿದ್ದು, ಈ ಸಮಿತಿಯ ಕಾರ್ಯ ನಿರ್ವಹಣೆಯ ಜವಾಬ್ದಾರಿ ಮಹತ್ವದ್ದು ಎಂದರು.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸರ್ಕಾರಗಳು ಕೈಗೊಂಡ ಖರ್ಚು-ವೆಚ್ಚಗಳ ಮೇಲೆ ನಿಗಾ ಇಡುವ ಹಾಗೂ ಕರದಾತರ ಹಣದ ಸದ್ಬಳಕೆ ಕುರಿತು ಕಣ್ಗಾವಲು ಇಡುವ ಮಹತ್ವದ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಪಕ್ಷಬೇಧ ಮರೆತು ಸಮಿತಿಯ ಪದಾಧಿಕಾರಿಗಳು ಸಾರ್ವಜನಿಕರ ಹಣ ಅನಾವಶ್ಯಕವಾಗಿ ಪೋಲಾಗದಂತೆ ಪಾರದರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ತೆರಿಗೆ ಸೋರಿಕೆ ತಡೆಯುವಲ್ಲಿ, ಕಡಿಮೆ ಕರ ಆಕರಣೆ ಹಾಗೂ ನಿರ್ಧರಣೆಯ ಕಾರಣಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ನೇರ ತೆರಿಗೆಯಾಗಿರುವ ಆದಾಯ ತೆರಿಗೆ ಮತ್ತು ಪರೋಕ್ಷ ತೆರಿಗೆಯಾಗಿರುವ ಜಿ.ಎಸ್.ಟಿ., ಸೀಮಾ ಸುಂಕ, ಅಬಕಾರಿ ಸುಂಕ ಸೇರಿದಂತೆ ಅನೇಕ ತೆರಿಗೆ ವ್ಯವಸ್ಥೆಗಳ ಕಾರ್ಯ ಪದ್ಧತಿ ವಿಮರ್ಶೆ ಮತ್ತು ಸಮರ್ಪಕ ಕಾರ್ಯ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಅಭಿವೃದ್ಧಿ ಕಾರ್ಯಗಳು ನಿಗದಿತ ಸಮಯದಲ್ಲಿ ಪ್ರಾರಂಭಗೊಂಡು ಕಾಲ ಮಿತಿಯಲ್ಲಿ ಮುಕ್ತಾಯಗೊಂಡ ಬಗ್ಗೆ ವಿಚಕ್ಷಣ ನಡೆಸುವ ಮೂಲಕ ದೇಶ, ರಾಜ್ಯಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮಹತ್ವದ ಕಾರ್ಯ ನಿರ್ವಹಿಸುತ್ತಿರುವದು ಶ್ಲಾಘನೀಯ ಎಂದು ಹೇಳಿದರು.
ಸಮಾರಂಭದಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ರಾಜ್ಯಸಭೆ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಅಧೀರ ರಂಜನ್ ಚೌಧರಿ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು ಹಾಗೂ ಎಲ್ಲಾ ರಾಜ್ಯಗಳ ಪೀಠಾಸೀನಾಧಿಕಾರಿಗಳು ಪಾಲ್ಗೊಂಡಿದ್ದರು