ಬೆಂಗಳೂರು: ಕೌಟುಂಬಿಕ ಕಾರಣಕ್ಕಾಗಿ ರಾಜಧಾನಿಯ ಮನೆಯೊಂದರಲ್ಲಿ ಪತ್ನಿ ಹಾಗೂ ಅತ್ತೆಯನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಕೃತ್ಯವೆಸಗಿದ ಬಳಿಕ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಲಪಾಳ್ಯದ ಮನೆಯೊಂದರಲ್ಲಿ ಪ್ರಕರಣ ಸಂಭವಿಸಿದ್ದು, ಪತ್ನಿ ಸುನೀತಾ ಹಾಗೂ ಅತ್ತೆ ಸರೋಜಮ್ಮ ಎಂಬುವರನ್ನು ಕೊಂದ ಆರೋಪಿ ರವಿ ಕುಮಾರ್ ಪೊಲೀಸರ ಮುಂದೆ ಸರೆಂಡರ್ ಆಗಿದ್ದಾನೆ.
ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯ ರವಿ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. 6 ತಿಂಗಳ ಹಿಂದಷ್ಟೇ ಮೂಡಲಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಎಳನೀರು ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ರವಿ ಜೀವನಕ್ಕಾಗಿ ಕಾಂಡಿಮೆಂಟ್ಸ್ ಅಂಗಡಿ ಇಟ್ಟುಕೊಂಡಿದ್ದ. 20 ವರ್ಷಗಳ ಹಿಂದೆ ಸಾವಿತ್ರಿಯೊಂದಿಗೆ ಮದುವೆ ಮಾಡಿಕೊಂಡಿದ್ದ.
ಇಬ್ಬರು ಮಕ್ಕಳನ್ನು ಹೊಂದಿರುವ ಅವರು ಅನ್ಯೋನ್ಯವಾಗಿಯೇ ಇದ್ದರು. ಆದರೆ, ಇತ್ತೀಚೆಗೆ ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಅನೈತಿಕ ಸಂಬಂಧ ಹೊಂದಿರುವುದಾಗಿ ಶಂಕಿಸಿ ಆಗಾಗ ಇಬ್ಬರ ನಡುವೆ ಜಗಳವಾಗುತ್ತಿತ್ತಂತೆ. ಇದೇ ವಿಚಾರಕ್ಕಾಗಿ ನಿನ್ನೆಯೂ ಸಹ ಗಲಾಟೆಯಾಗಿದೆ ಎನ್ನಲಾಗಿದೆ.
ಇಂದು ಬೆಳಗ್ಗೆ ಮಕ್ಕಳಿಬ್ಬರನ್ನು ಶಾಲೆಗೆ ಕಳುಹಿಸಿ ಪತ್ನಿಯೊಂದಿಗೆ ಗಲಾಟೆ ತೆಗೆದಿದ್ದನಂತೆ. ಮಾತಿನ ಚಕಮಕಿ ಹೆಚ್ಚಾಗಿ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮನೆಯಲ್ಲಿದ್ದ ಎಳನೀರು ಕೊಚ್ಚುವ ಮಚ್ಚಿನಿಂದ ರವಿ ಪತ್ನಿಯ ಕುತ್ತಿಗೆ ಸೀಳಿದ್ದಾನೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಶಿವಮೊಗ್ಗ ಹರ್ಷ ಕೊಲೆ ಪ್ರಕರಣ: ಮತ್ತೆ 12 ಜನರ ವಿಚಾರಣೆ ನಡೆಯುತ್ತಿದೆ- ಆರಗ ಜ್ಞಾನೇಂದ್ರ
ಅತ್ತೆ ಸರೋಜಮ್ಮ ಮೇಲೆಯೂ ಮಚ್ಚು ಬೀಸಿದ್ದ ಪರಿಣಾಮ ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ. ದುಷ್ಕೃತ್ಯದ ಬಳಿಕ ಆರೋಪಿ ಗೋವಿಂದರಾಜನಗರ ಪೊಲೀಸರ ಮುಂದೆ ಹಾಜರಾಗಿ ಹತ್ಯೆ ಬಗ್ಗೆ ಮಾಹಿತಿ ನೀಡಿ ಸರೆಂಡರ್ ಆಗಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.