ಬೆಂಗಳೂರು: ಸದ್ಯಕ್ಕೆ ಶಾಲಾ-ಕಾಲೇಜುಗಳನ್ನು ಪುನಾರಂಭಿಸುವುದು ಬೇಡ ಎಂಬ ಅಭಿಪ್ರಾಯ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ವ್ಯಕ್ತವಾಗಿದ್ದು, ಸಿಎಂ ಯಡಿಯೂರಪ್ಪ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ತಕ್ಷಣ ಶಾಲಾ-ಕಾಲೇಜು ಆರಂಭಿಸುವುದು ಬೇಡ. ಪೋಷಕರಲ್ಲಿ ಆತಂಕ ಇದೆ. ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋದರೆ ಗುಂಪು ಸೇರಿ ಸೋಂಕು ತಗುಲುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ಶಾಲಾ-ಕಾಲೇಜು ಆರಂಭಿಸುವುದು ಬೇಡ ಎಂದು ಮನವಿ ಮಾಡಿದ್ದೇವೆ. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಇನ್ನು ಆನ್‌ಲೈನ್ ಶಿಕ್ಷಣವನ್ನು ತಕ್ಷಣ ನಿಲ್ಲಿಸುವಂತೆ ಸಲಹೆ ನೀಡಿದ್ದೇವೆ. ಇದರಿಂದ ಮಕ್ಕಳಿಗೆ ಕಣ್ಣಿನ ಸಮಸ್ಯೆ ಸೇರಿದಂತೆ ಆರೋಗ್ಯದ ಮೇಲೆ ಹಲವು ಪರಿಣಾಮ ಬೀರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆ ಅದನ್ನು ತಕ್ಷಣ ಕೈಬಿಡಬೇಕು ಎಂದು ಮನವಿ ಮಾಡಿದ್ದೇವೆ. ಅದಕ್ಕೂ ಸಿಎಂ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಬೇರೆ ರಾಜ್ಯದಿಂದ ಬರುವರಿಗೆ ಕಡ್ಡಾಯ ಹೋಂ ಕ್ವಾರಂಟೈನ್:
ಅನೇಕರು ಹೊರ ರಾಜ್ಯದಿಂದ ಕರ್ನಾಟಕಕ್ಕೆ ಪ್ರವೇಶ ಮಾಡ್ತಾ ಇದ್ದಾರೆ. ಸರ್ಕಾರ ಬೇರೆ ರಾಜ್ಯದಿಂದ ಬರುವವರಿಗೆ ಹೋಂ ಕ್ವಾರಂಟೈನ್ನಲ್ಲಿ ಇರಲು ಸೂಚನೆ ನೀಡಿದೆ. ಆದರೆ ಹಲವರು ಹೋಂ ಕ್ವಾರಂಟೈನ್ಗೆ ಹೋಗ್ತಾ ಇಲ್ಲ. ಹಲವರು ಮನೆಯಿಂದ ಹೊರ ಬರುತ್ತಿದ್ದಾರೆ. ಅದನ್ನು ಸಭೆಯಲ್ಲಿ ಸಿಎಂ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. ಬೇರೆ ರಾಜ್ಯಗಳಿಂದ ಬರುವ ಜನರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್ನಲ್ಲಿ ಇಡುವಂತೆ ಮನವಿ ಮಾಡಿದ್ದೇವೆ. ಅದಕ್ಕೆ ಸಿಎಂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಮೋದಿ ಸಾಧನೆ ತಿಳಿಸಲು ಜನಸಂಪರ್ಕ ಕಾರ್ಯಕ್ರಮ:
ಮೋದಿ ಸರ್ಕಾರಕ್ಕೆ ಒಂದು ವರ್ಷ ಆಗಿದೆ. ಮೋದಿ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಮೂರು ಕಾರ್ಯಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ದೇಶಕ್ಕೆ ಆತ್ಮ ನಿರ್ಭರ ಘೋಷಣೆಯೊಂದಿಗೆ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನೀಡಲಾಗಿದೆ. ಇದೂ ಸೇರಿ ಕೊರೊನಾ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಜನರಿಗೆ ತಿಳಿಸಲು ಜನಸಂಪರ್ಕ ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಿದ್ದೇವೆ. ಮನೆ ಮನೆಗೆ ತೆರಳಿ ಮೋದಿ ಸಾಧನೆಯ ಕರಪತ್ರ ವಿತರಿಸಲಿದ್ದೇವೆ ಎಂದು ವಿವರಿಸಿದರು.
ಜೊತೆಗೆ ವರ್ಚುವಲ್ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ. ಮೋದಿ ಸರ್ಕಾರದ ಸಾಧನೆ ಬಗ್ಗೆ ವರ್ಚುವಲ್ ರ್ಯಾಲಿ ಮಾಡಲಾಗುತ್ತದೆ ಎಂದರು.
ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಹಲವು ಲೋಪದೋಷ ಇವೆ. ಈ ಬಗ್ಗೆ ಸಮಗ್ರ ಸಮಾಲೋಚನೆ ಮಾಡುವ ಹಿನ್ನೆಲೆ ಬಿಜೆಪಿಯ ಹಿರಿಯ ನಾಯಕರು, ಕಾನೂನು ಪರಿಣಿತರನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಪಡೆದು, ಪಕ್ಷದ ನಿಲುವನ್ನು ಸಭಾಧ್ಯಕ್ಷರಿಗೆ ತಿಳಿಸಲಿದ್ದೇವೆ. ಇದಕ್ಕಾಗಿ ತಮ್ಮ ನೇತೃತ್ವದಲ್ಲಿ 9 ಜನರ ಸಮಿತಿ ನೇಮಿಸಲಾಗಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.