ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಯುವ ಕಾಂಗ್ರೆಸ್ ಚುನಾವಣಾ ಮುಖ್ಯಸ್ಥ ರಾಜ್ ಪಾಲ್ ಬಿಸ್ತ್ ಹಾಗೂ ಪಿ.ಆರ್.ಓ ಡಾ. ರಾಮ್ ಜಿ ಅನ್ನೆಪು ಅವರು ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
![ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸಭೆ](https://etvbharatimages.akamaized.net/etvbharat/prod-images/kn-bng-14-dks-meeting-kpcc-script-7208077_06102020223646_0610f_1602004006_512.jpg)
ಕೆಪಿಸಿಸಿ ಕಚೇರಿಗೆ ಇಂದು ಡಿ.ಕೆ. ಶಿವಕುಮಾರ್ ಭೇಟಿ ನೀಡಿದ ಸಂದರ್ಭ ಈ ಸಭೆ ನಡೆಯಿತು. ರಾಷ್ಟ್ರೀಯ ಯುವ ಕಾಂಗ್ರೆಸ್ ಚುನಾವಣೆ ಕೆಲವೇ ದಿನಗಳಲ್ಲಿ ನಡೆಯಲಿದ್ದು, ಸೂಕ್ತ ಅಭ್ಯರ್ಥಿ ಆಯ್ಕೆ ಹಾಗೂ ಸಮರ್ಥರನ್ನು ಪತ್ತೆ ಮಾಡುವ ವಿಚಾರವಾಗಿ ಈ ಸಂದರ್ಭ ಸುದೀರ್ಘ ಚರ್ಚೆ ನಡೆಯಿತು. ಈಗಾಗಲೇ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡುವ ಯುವ ಕಾರ್ಯಕರ್ತರಿಗೆ ಉತ್ತಮ ಅವಕಾಶ ನೀಡುವ ಭರವಸೆಯನ್ನು ಶಿವಕುಮಾರ್ ನೀಡಿದ್ದು, ಇಂಥದೊಂದು ಪ್ರಯತ್ನ ಎಷ್ಟರಮಟ್ಟಿಗೆ ಕೊಡಲಿದೆ ಎಂಬ ಕುರಿತು ನಾಯಕರು ಸಮಾಲೋಚಿಸಿದರು.
![ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸಭೆ](https://etvbharatimages.akamaized.net/etvbharat/prod-images/kn-bng-14-dks-meeting-kpcc-script-7208077_06102020223646_0610f_1602004006_480.jpg)
ಮುಂದಿನ ದಿನಗಳಲ್ಲಿ ಎದುರಾಗುವ ಯುವ ಕಾಂಗ್ರೆಸ್ ಚುನಾವಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುವ ಹಾಗೂ ಸಮರ್ಥರನ್ನು ಹುಡುಕಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ಹಾಗೂ ಕೇಡರ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಸಾಧ್ಯತೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಯುವ ಸಮುದಾಯಕ್ಕೆ ವಿವರಿಸುವ ಹಾಗೂ ಅವರನ್ನು ಪಕ್ಷದ ಸದಸ್ಯರನ್ನಾಗಿಸಿ ಕಾಂಗ್ರೆಸ್ ನಾಯಕರ ಹೋರಾಟಗಳ ಅರಿವು ಮೂಡಿಸುವ ಮತ್ತು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪಕ್ಷದ ಪಾತ್ರ ಏನಿದೆ ಎಂಬುದನ್ನು ವಿವರಿಸುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಮೂಲಕವೇ ನಡೆಸಬೇಕು ಎಂದು ಚರ್ಚಿಸಲಾಯಿತು.
![ಕರ್ನಾಟಕ ಕಾಂಗ್ರೆಸ್ ಟ್ವೀಟ್](https://etvbharatimages.akamaized.net/etvbharat/prod-images/9077386_99_9077386_1602004790695.png)
ಬಿಜೆಪಿಯ ಕಣ್ಣು ಕಟ್ಟುವ ತಂತ್ರ ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ಯುವಕರನ್ನು ಸೆಳೆದು, ಸುಳ್ಳು ಮಾಹಿತಿಯನ್ನು ಸಾಧ್ಯವಾಗಿಸುವ ಗಿಮಿಕ್ ರಾಜಕಾರಣವನ್ನು ಜನರ ಮುಂದೆ ಬಯಲು ಮಾಡುವ ಕಾರ್ಯವನ್ನು ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಮಾಡಬೇಕು ಎಂಬ ಕುರಿತು ಚರ್ಚೆ ನಡೆಯಿತು. ಕಾರ್ಯಾಧ್ಯಕ್ಷ ಸಲೀಂ ಅಹಮದ್ ಈ ಸಂದರ್ಭ ಉಪಸ್ಥಿತರಿದ್ದರು.