ಬೆಂಗಳೂರು: ಅಕ್ರಮ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನೀಡಿರುವ ಸಮನ್ಸ್ ರದ್ದು ಕೋರಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಇಂದು ರದ್ದು ಮಾಡಿದೆ. ಈ ಹಿನ್ನೆಲೆ ಆದೇಶವನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.
ಹೈಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್, ತಮ್ಮ ಪರ ವಕೀಲರೊಂದಿಗೆ ಮುಂದಿನ ಹೆಜ್ಜೆಯ ಕುರಿತು ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ ಆದೇಶವನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಈ ಬಗ್ಗೆ ವಕೀಲರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಹೈಕೋರ್ಟ್ ವಜಾಗೊಳಿಸಿರುವ ಶಿವಕುಮಾರ್ ಅವರ ಅರ್ಜಿ ಆದೇಶದ ಪ್ರತಿಯನ್ನು ಇಂದು ಅಥವಾ ನಾಳೆ ಪಡೆದುಕೊಳ್ಳುವ ವಕೀಲರು ಅದನ್ನು ಪರಿಶೀಲಿಸಿದ ನಂತರ ಸುಪ್ರೀಂಕೋರ್ಟ್ ಮೆಟ್ಟಿಲೇರುವ ನಿರೀಕ್ಷೆ ಇದೆ. ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗಲು ತಮ್ಮ ವಕೀಲರ ಮೂಲಕ ಡಿ.ಕೆ.ಶಿವಕುಮಾರ್ ಸಮಯಾವಕಾಶ ಕೇಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇನ್ನು ಒಂದು ವೇಳೆ ಕಾಲಾವಕಾಶ ನೀಡದಿದ್ದರೆ ಅವರು ಇಡಿ ಸಮನ್ಸ್ಗೆ ಉತ್ತರ ಕೊಡಬೇಕಾಗುತ್ತದೆ. ಇಲ್ಲದಿದ್ದರೆ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆಯಬಹುದು.
ದೆಹಲಿ ನಿವಾಸದಲ್ಲಿ ಈ ಹಿಂದೆ ಕೋಟ್ಯಂತರ ರೂ. ಅಕ್ರಮ ಹಣ ಪತ್ತೆಯಾಗಿತ್ತು. ಈ ಸಂಬಂಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್ಗೆ ಇಡಿ ಸಮನ್ಸ್ ಹೊರಡಿಸಿತ್ತು.