ಬೆಂಗಳೂರು : ಲೋಕಸಭಾ ಚುನಾವಣೆ ಮುಗಿದ ಬಳಿಗ ಎಲ್ಲರ ಗಮನ ಲೋಕಲ್ ಎಲೆಕ್ಷನ್ ಮೇಲೆ ಬಿದ್ದಿದೆ. ಅದರಲ್ಲೂ ವಿಮಾನ ನಗರಿ ದೇವನಹಳ್ಳಿ ಪುರಸಭೆ ಚುನಾವಣೆ ಎಲ್ಲರಿಗೂ ಕುತೂಹಲ ಸೃಷ್ಟಿಸಿದೆ.
ಈಗಾಗಲೇ ಚುನಾವಣಾ ಪ್ರಕ್ರಿಯೆ ಚುರುಕುಗೊಂಡಿದ್ದು, ದಶಕಗಳಿಂದ ಕಣದಲ್ಲಿರುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಈ ಸಲ ಬಿಗ್ ಪೈಟ್ ನೀಡಲು ಬಿಜೆಪಿ ಮುಂದಾಗಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಪುರಸಭೆಗೆ ತನ್ನ 22 ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯಿಂದ ಬಿ.ಎನ್ ಬಚ್ಚೇಗೌಡರನ್ನು ಮತದಾರರು ಗೆಲ್ಲಿಸಿದ್ದಾರೆ. ಅದೇ ರೀತಿ ಈ ಸಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ತನ್ನ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಾರೆ ಎಂಬ ವಿಶ್ವಾಸ ಬಿಜೆಪಿಗಿದೆ.
ಮೂರು ಪಕ್ಷದ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ :
ಚಿಕ್ಕಬಳ್ಳಾಪುರ ಲೋಕಸಭಾ ಎಲೆಕ್ಷನ್ ರೀತಿಯೇ ದೇವನಹಳ್ಳಿ ಪುರಸಭೆ ಚುನಾವಣೆಯೂ ಕುತೂಹಲವನ್ನುಂಟು ಮಾಡುತ್ತಿದೆ. ಪಟ್ಟಣದಲ್ಲಿ ಬಹುತೇಕ ಪ್ರಜ್ಞಾವಂತ ಮತದಾರರಿದ್ದು ಯಾವ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆ ಅನ್ನೋ ಕಾತುರ ಎಲ್ಲ ಪಕ್ಷಗಳಿಗೂ ಇದೆ. ಬಿಜೆಪಿಯಂತೆ ಕಾಂಗ್ರೆಸ್, ಜೆಡಿಎಸ್ ಪ್ರಚಾರ ಕೂಡ ಜೋರಾಗಿದೆ. ದೇವನಹಳ್ಳಿ ಪುರಸಭೆಗೆ ಬಹುಮತ ಬಾರದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತ ನಡೆಸುತ್ತಿದ್ದವು. ಇದರಿಂದ ಈ ಎರಡೂ ಪಕ್ಷಗಳ ಆಡಳಿತಕ್ಕೆ ವಿರೋಧ ಪಕ್ಷದ ಭಯವಿರಲಿಲ್ಲ. ಬಿಜೆಪಿ ಸೇರಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಮೊದಲು ಸುಲಭವಾಗಿರಲಿಲ್ಲ. ಇದೀಗ ಮೂರೂ ಪಕ್ಷಗಳು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲೇ ಕಣಕ್ಕಿಳಿದಿವೆ. ನಾಳೆ ನಡೆಯುವ ಮತದಾನದಲ್ಲಿ ಯಾರ ಪರ ಮತದಾರರು ಹಕ್ಕು ಚಲಾಯಿಸುತ್ತಾರೆ ಅನ್ನೋದು ಗೌಪ್ಯವಾಗಿದೆ.
ದೇವನಹಳ್ಳಿ ಪುರಸಭೆಯಲ್ಲಿ ಇದೇ ಮೊದಲ ಬಾರಿಗೆ ನಿರೀಕ್ಷೆಗೂ ಮೀರಿ ಪಕ್ಷೇತರ ಅಭ್ಯರ್ಥಿಗಳು ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ಲೋಕಲ್ ಎಲೆಕ್ಷನ್ ಆಗಿರುವುದರಿಂದ ಈ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ಹಾಗಾಗಿ 15 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೆಲವರು ಪಕ್ಷದಿಂದ ಬಿ.ಫಾರಂ ನೀಡದ ಕಾರಣ ಪಕ್ಷೇತರರಾಗಿ ಸ್ಪರ್ದಿಸಿದಾರೆ. ಮತ್ತೆ ಕೆಲವರು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿ ಕಣಕ್ಕಿಳಿದಿದ್ದಾರೆ. ಇದರಿಂದ ಈ ಬಾರಿಯ ದೇವನಹಳ್ಳಿ ಪುರಸಭೆ ಚುನಾವಣೆ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಮೂರು ಪಕ್ಷಗಳು ಮತ್ತು ಪಕ್ಷೇತರ ಅಭ್ಯರ್ಥಿಗಳೂ ಸೇರಿದಂತೆ 78 ಮಂದಿಯ ಹಣೆಬರಹವನ್ನು ನಾಳೆ ಮತದಾರರು ನಿರ್ಧರಿಸಲಿದ್ದಾರೆ.