ಬೆಂಗಳೂರು : ತುರ್ತು ಸಂದರ್ಭದಲ್ಲಿ ಅನಿವಾರ್ಯ ಸನ್ನಿವೇಶದಲ್ಲಿ ಕೋವಿಡ್ ಪೀಡಿತ ಸರ್ಕಾರಿ ನೌಕರರು ಹಾಗೂ ಕುಟುಂಬ ಸದಸ್ಯರು ಸಾರ್ವಜನಿಕ ಆರೋಗ್ಯ ಪ್ರಾಧಿಕಾರದ ಶಿಫಾರಸು ಇಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚದ ಮರುಪಾವತಿಯನ್ನು ಪರಿಗಣಿಸಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ಕೋವಿಡ್ ಪೀಡಿತ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಸಂಬಂಧಿಸಿದಂತೆ ಕ್ರಮವಹಿಸಲು ಸೂಚಿಸಲಾಗಿದೆ.
ಕೋವಿಡ್ ಚಿಕಿತ್ಸೆಗಾಗಿ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಗಾಗಿ ಭರಿಸಿರುವ ವೆಚ್ಚ ಮರುಪಾವತಿಗಾಗಿ ದರಗಳನ್ನು ನಿಗದಿಪಡಿಸಲಾಗಿದೆ.
ಜನರಲ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆದರೆ ಅರ್ಹ ಮರುಪಾವತಿ ಪ್ಯಾಕೇಜ್ ಮೊತ್ತ ದಿನಕ್ಕೆ 10,000 ರೂ., ಹೆಚ್ಡಿಯು ವಾರ್ಡ್ನಲ್ಲಿ ಚಿಕಿತ್ಸೆ ಪಡೆದರೆ ಅರ್ಹ ಮರುಪಾವತಿ ಪ್ಯಾಕೇಜ್ ಮೊತ್ತ ದಿನಕ್ಕೆ 12,000 ರೂ., ವೆಂಟಿಲೇಟರ್ ರಹಿತ ಪ್ರತ್ಯೇಕ ಐಸಿಯುನಲ್ಲಿ ಚಿಕಿತ್ಸೆ ಪಡೆದರೆ ದಿನಕ್ಕೆ 15,000 ರೂ. ಹಾಗೂ ವೆಂಟಿಲೇಟರ್ ಸಹಿತ ಪ್ರತ್ಯೇಕ ಐಸಿಯು ಚಿಕಿತ್ಸೆ ಪಡೆದವರಿಗೆ ದಿನಕ್ಕೆ 25,000 ರೂ.ನಂತೆ ಮರುಪಾವತಿ ಮೊತ್ತ ಪಡೆಯಬಹುದಾಗಿದೆ.