ಬೆಂಗಳೂರು : ರಾಜ್ಯದ ಎಲ್ಲ ಕೆರೆಗಳಲ್ಲೂ ಮೀನು ಬೆಳೆಸಲು ರಾಜ್ಯ ಸರ್ಕಾರ ಈಗಾಗಲೇ ಮುಂದಾಗಿದೆ. ಎರಡು ವರ್ಷಗಳಲ್ಲಿ ಮೀನು ಉತ್ಪಾದನೆಯನ್ನು 8 ಸಾವಿರ ಮೆಟ್ರಿಕ್ ಟನ್ ಗಳಿಗೇರಿಸಲು ನಿರ್ಧರಿಸಿದೆ.
ಇಂದು ಈ ಕುರಿತಾಗಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಕರ್ನಾಟಕದ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿದ್ದಾರೆ. ರಾಜ್ಯದ ಒಳನಾಡಿನಲ್ಲಿ ವಾರ್ಷಿಕವಾಗಿ ನಾಲ್ಕು ಸಾವಿರ ಮೆಟ್ರಿಕ್ ಟನ್ ಗಳಷ್ಟು ಮೀನು ಉತ್ಪಾದನೆಯಾಗುತ್ತಿದೆ. ಇದನ್ನು ಎಂಟು ಸಾವಿರ ಮೆಟ್ರಿಕ್ ಟನ್ ಗಳಿಗೇರಿಸುವುದು ನಮ್ಮ ಗುರಿ.
ಸಮುದ್ರ ಮೀನುಗಾರಿಕೆಯಿಂದ ವಾರ್ಷಿಕ ಮೂರು ಲಕ್ಷ ಮೆಟ್ರಿಕ್ ಟನ್ ಗಳಷ್ಟು ಮೀನು ಉತ್ಪಾದನೆಯಾಗುತ್ತಿದೆ. ಇದನ್ನು ಮುಂದಿನ ಎರಡು ವರ್ಷಗಳಲ್ಲಿ ದುಪ್ಪಟ್ಟುಗೊಳಿಸಲು ಯೋಚಿಸಲಾಗಿದೆ. ಮೀನುಗಾರಿಕೆ ಮಾಡಲು ಆಳದ ಸಮುದ್ರದವರೆಗೆ ಹೋಗಲು ಅವಕಾಶ ನೀಡಲಾಗಿದೆ. ಆ ಮೂಲಕ ಮೀನು ಉತ್ಪಾದನೆಯ ಪ್ರಮಾಣವನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಲಾಗಿದೆ ಎಂದು ಮೀನುಗಾರಿಕಾ ಸಚಿವರು ಹೇಳಿದ್ದಾರೆ.
ಹೆಚ್ಚುವರಿ ಮೀನು ಉತ್ಪಾದನೆಗೆ ತೀರ್ಮಾನ: ಸಮುದ್ರ ಮೀನುಗಾರಿಕೆ ಮತ್ತು ಒಳನಾಡು ಮೀನುಗಾರಿಕೆಯಿಂದ ಇಷ್ಟು ಪ್ರಮಾಣದ ಮೀನು ಉತ್ಪಾದನೆಯಾದರೂ ಬೇಡಿಕೆಗೆ ಹೋಲಿಸಿದರೆ ಅದು ಕಡಿಮೆ. ಹೀಗಾಗಿ ಎರಡು ವಿಭಾಗಗಳಿಂದ ಹೆಚ್ಚುವರಿ ಮೀನು ಉತ್ಪಾದನೆಗೆ ತೀರ್ಮಾನಿಸಲಾಗಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಮೀನು ಉತ್ಪಾದನೆ ಮಾಡುವ ರಾಜ್ಯಗಳಲ್ಲಿ ಗುಜರಾತ್ ಗೆ ಮೊದಲ ಸ್ಥಾನ. ಕರ್ನಾಟಕಕ್ಕೆ ನಾಲ್ಕನೇ ಸ್ಥಾನವಿದೆ.
ಈ ಮಧ್ಯೆ ರಾಜ್ಯದ ಬೇಡಿಕೆಗೆ ತಕ್ಕಷ್ಟು ಮೀನು ಉತ್ಪಾದನೆಯಾಗದೇ ಇರುವುದರಿಂದ ನೆರೆಯ ಆಂಧ್ರಪ್ರದೇಶ,ತಮಿಳುನಾಡು, ಕೇರಳ ರಾಜ್ಯಗಳಿಂದ ಕರ್ನಾಟಕಕ್ಕೆ ಮೀನು ಆಮದು ಕಾರ್ಯ ನಡೆಯುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಮೀನಿನ ಬೆಲೆ ಹೆಚ್ಚಾಗುತ್ತಿದೆ. ಉತ್ಪಾದನೆ ಅಧಿಕವಾದಂತೆಲ್ಲ, ಮಾರುಕಟ್ಟೆಯಲ್ಲಿ ಮೀನಿನ ದರವೂ ಕಡಿಮೆಯಾಗಲಿದೆ ಎಂದು ವಿವರಿಸಿದರು.
ಒಳನಾಡು ಮೀನುಗಾರಿಕೆಗೆ ನಾನಾ ಬಗೆಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಹೊಂಡಗಳನ್ನು ಮಾಡಿ ಮೀನು ಸಾಕಲು, ಸರ್ಕಾರ ಸಹಾಯಧನ ನೀಡಲಿದೆ. ಬಯೋಕ್ಲಿಕ್ ಪದ್ಧತಿಯಡಿ ಟ್ಯಾಂಕರ್ ಗಳನ್ನು ನಿರ್ಮಿಸಿ ಮೀನು ಸಾಕಲು ಒಬ್ಬರಿಗೆ ಐದರಿಂದ ಹತ್ತು ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು.
ಅವರಿಗೆ ರಾಜ್ಯದ ಎಲ್ಲ ಕೆರೆಗಳಲ್ಲೂ ಮೀನುಗಾರಿಕೆಗೆ ಅವಕಾಶ ಮಾಡಿಕೊಡಲಾಗುವುದು. ಈ ಮಾದರಿಯಲ್ಲಿ ಮೀನು ಸಾಕಲು ರಾಜ್ಯಾದ್ಯಂತ ಐನೂರಕ್ಕೂ ಹೆಚ್ಚು ಜನ ಮುಂದೆ ಬಂದಿದ್ದು ಈ ಪ್ರಮಾಣ ಕ್ರಮೇಣ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೀನುಗಾರಿಕೆ ಮಾಡಲು ಉತ್ಸುಕತೆ ತೋರುತ್ತಿರುವ ಸ್ವಸಹಾಯ ಸಂಘಗಳಿಗೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಕೋವಿಡ್: ಅಗತ್ಯ ಮುನ್ನೆಚ್ಚರಿಕೆ ಮತ್ತಷ್ಟು ಸಮಯ ಮುಂದುವರೆಸಬೇಕು: ಸಚಿವ ಡಾ ಸುಧಾಕರ್