ಬೆಂಗಳೂರು : ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಅನುಕೂಲವಾಗುವಂತೆ ಇಂದು ಬಿಎಂಆರ್‌ಡಿಎ ಕಚೇರಿಯಲ್ಲಿ ಬಿ-ಪ್ಯಾಕ್ ಮತ್ತು ಉಮ್ಟಾ ಸಹಯೋಗದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಸಭೆ ನಡೆಸಿ, ನಗರದ ಎಲ್ಲ ಸಾರಿಗೆ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸಿದರೆ ಸಂಚಾರ ವ್ಯವಸ್ಥೆಗೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ನಗರದಲ್ಲಿ ಎಲ್ಲ ಸಂಪನ್ಮೂಲಗಳಿದ್ದರೂ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಬಿಎಂಟಿಸಿ, ಬಿಎಂಆರ್‌ಸಿಎಲ್ ಮುಂದಿನ ದಿನಗಳಲ್ಲಿ ಸಬ್ ಅರ್ಬನ್ ರೈಲು ಸಮನ್ವಯತೆಯಿಂದ ಸೇವೆ ನೀಡಿದರೆ ನಗರದಲ್ಲಿ ಸಂಚಾರ ವ್ಯವಸ್ಥೆ ಸಲೀಸಾಗಲಿದೆ ಎಂದರು.
ಬಿಎಂಟಿಸಿಗೆ ಮತ್ತು ನಮ್ಮ ಮೆಟ್ರೋ ಎಂದಿಗೂ ಪ್ರತಿಸ್ಪರ್ಧಿಯಲ್ಲ. ಬದಲಾಗಿ ಎರಡೂ ಸಂಸ್ಥೆಗಳು ಪರಸ್ಪರ ಸಹಕಾರಿಯಾದರೆ ಇನ್ನೂ ಉತ್ತಮ ಸೇವೆ ನೀಡಬಹುದು. ನಗರ ಸಾರಿಗೆಗಳ ಉನ್ನತೀಕರಣಕ್ಕೆ ಸರಿಯಾದ ಭೂ ಬಳಕೆ, ನಗರ ಸಾರಿಗೆ ಸಂಸ್ಥೆಗಳ ಸಮನ್ವಯತೆ, ಸಂಸ್ಥೆಗಳ ರಚನೆ ಬಹುಮುಖ್ಯ. ಯಾವುದೇ ನಗರ ಈ ಸೂತ್ರವನ್ನು ಅನುಸರಿಸಿದರೆ ನಗರ ಸಾರಿಗೆ ವ್ಯವಸ್ಥೆ ಉತ್ತಮವಾಗುತ್ತದೆ. ಇದೇ ಲಂಡನ್‌ನಂತಹ ನಗರಗಳ ಯಶಸ್ಸಿನ ಗುಟ್ಟು ಎಂದರು.
ಲಂಡನ್ ನಗರ 1,500 ಚದುರ ಕಿ.ಮೀ.ನಷ್ಟಿದ್ದರೂ ಅಲ್ಲಿ ಟ್ರಾಫಿಕ್ ಸಮಸ್ಯೆ ಬೆಂಗಳೂರಿನಷ್ಟಿಲ್ಲ. 1200 ಚದುರ ಕಿ.ಮೀ. ವಿಸ್ತೀರ್ಣ ಇರುವ ಬೆಂಗಳೂರಿನಲ್ಲಿ ಭೂ ಬಳಕೆಗೆ ಸರಿಯಾದ ಯೋಜನೆ ಇಲ್ಲದ ಕಾರಣ ಇಲ್ಲಿ ಸಮಸ್ಯೆ ಹಾಗೆಯೇ ಉಳಿದಿದೆ. ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದ್ದು, ಕೇಂದ್ರದ ಸಾರಿಗೆ ಸಚಿವಾಲಯ ಮತ್ತು ಲಂಡನ್ ಸಾರಿಗೆ ವ್ಯವಸ್ಥೆಗೆ ಸಲಹೆ ನೀಡುತ್ತಿರುವ ಶಶಿ ವರ್ಮಾರವರ ಸಲಹೆಗಳನ್ನು ಪಡೆಯಲು ಸಭೆ ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.
ಇನ್ನು ಸಭೆಯಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಬೆಂಗಳೂರು ನಗರ ಸಂಚಾರ ಆಯುಕ್ತ ರವಿಕಾಂತೇಗೌಡ, ಬಿ ಪ್ಯಾಕ್ ಪ್ರತಿನಿಧಿಗಳು ಭಾಗಿಯಾಗಿದರು.