ಬೆಂಗಳೂರು: ತಕ್ಷಣವೇ ಕೋಲಾರ ಜಿಲ್ಲೆಯಲ್ಲಿ 300 ಆಕ್ಸಿಜನ್ ಬೆಡ್‌ಗಳು, 150 ಐಸಿಯು ಬೆಡ್‌ಗಳು ಹಾಗೂ 40 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ವರ್ಚುಯಲ್ ಸಭೆಯ ಮೂಲಕ ಕೋಲಾರ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳು, ಎಲ್ಲ ತಾಲೂಕುಗಳ ಆರೋಗ್ಯ ಮತ್ತಿತರ ಇಲಾಖೆಗಳ ಅಧಿಕಾರಿಗಳ ಜತೆ ಕೋವಿಡ್ ಪರಿಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಿದರು.
"ಕೋಲಾರ ಜಿಲ್ಲೆಯಲ್ಲಿರುವ 750 ಆಕ್ಸಿಜನ್ ಬೆಡ್‌ಗಳು ಹಾಗೂ 190 ಐಸಿಯು ವೆಂಟಿಲೇಟರ್‌ಗಳ ನಿರ್ವಹಣೆಗೆ ನುರಿತ ಸಿಬ್ಬಂದಿ ನೇಮಿಸಿಕೊಳ್ಳಲಾಗುವುದು. ಆದಷ್ಟು ಬೇಗ ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲ ಬೆಡ್‌ಗಳನ್ನು ಆಕ್ಸಿಜನ್ ಬೆಡ್‌ಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಹತ್ತಿರದ ದೇವರಾಜ ಅರಸು ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲೂ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಾಕಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಡಿಸಿಎಂ ಸಭೆಗೆ ಮಾಹಿತಿ ನೀಡಿದರು.
ನಿನ್ನೆ (ಸೋಮವಾರ) ಒಂದೇ ದಿನ ಜಿಲ್ಲೆಯಲ್ಲಿ 622 ಸೋಂಕಿತರು ಪತ್ತೆಯಾಗಿದ್ದಾರೆ. ಈಗ ಜಿಲ್ಲೆಯಲ್ಲಿ 3,600 ಜನ ಸೋಂಕಿತರಿದ್ದಾರೆ. ಇವರಲ್ಲಿ ಶೇ.10ರಷ್ಟು ಅಂದರೆ, 360 ಜನರಿಗೆ ಮಾತ್ರ ಆಕ್ಸಿಜನ್ ಅವಶ್ಯಕತೆ ಇದೆ. ಉಳಿದವರು ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯಬಹುದು. ಜಿಲ್ಲಾಡಳಿತ ಎಲ್ಲ ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದು, ಇನ್ನು ವೇಗವಾಗಿ ಜನರಿಗೆ ಸ್ಪಂದಿಸುವಂತೆ ಡಿಸಿಗೆ ನಿರ್ದೇಶನ ನೀಡಿದರು.
24 ಗಂಟೆಯೊಳಗೆ ವರದಿ
ರೋಗ ಲಕ್ಷಣಗಳುಳ್ಳ ಪ್ರತಿಯೊಬ್ಬರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದ ಡಿಸಿಎಂ, ಪರೀಕ್ಷೆ ನಂತರ 24 ಗಂಟೆಗಳ ಒಳಗಾಗಿ ಫಲಿತಾಂಶ ಕೊಡಬೇಕು. ಒಂದು ವೇಳೆ ಪಾಸಿಟಿವ್ ಬಂದಿದ್ದರೆ ಕೂಡಲೇ ಚಿಕಿತ್ಸೆ ಆರಂಭಿಸಬೇಕು. ಹೋಮ್ ಐಸೋಲೇಷನ್ ಆಗಿರುವವರಿಗೆ ಮೆಡಿಕಲ್ ಕಿಟ್ ಕೊಡಬೇಕು. ಕಾಲಕಾಲಕ್ಕೆ ಅವರನ್ನು ಫಾಲೋ ಅಪ್ ಮಾಡುತ್ತಿರಬೇಕು. ಸೋಂಕಿನ ಪ್ರಮಾಣವನ್ನು ಪರಿಶೀಲಿಸುತ್ತಲೇ ಇರಬೇಕು ಎಂದು ಡಾ.ಅಶ್ವತ್ಥನಾರಾಯಣ ಅವರು ವೈದ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟರು.
ಆ್ಯಂಬುಲೆನ್ಸ್ ಚಾಲಕರಿಗೆ ತಕ್ಷಣವೇ ವೇತನ
ಆ್ಯಂಬುಲೆನ್ಸ್ ಚಾಲಕರಿಗೆ ಎರಡು ತಿಂಗಳಿನಿಂದ ವೇತನ ಆಗಿಲ್ಲ ಎಂದು ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಡಿಸಿಎಂ, ತಕ್ಷಣವೇ ಅವರ ವೇತನದಲ್ಲಿ ಒಂದು ಪೈಸೆಯೂ ಬಾಕಿ ಇರದಂತೆ ಪಾವತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಅವರು, ಕೂಡಲೇ ಪರಿಶೀಲಿಸಿ ವೇತನ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ವೈದ್ಯಕೀಯ ಉತ್ಪನ್ನಗಳಿಗೆ ಕೊರತೆ ಆಗಬಾರದು ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಬಳಕೆಯ ವಸ್ತುಗಳ ಕೊರತೆಯಿಂದ ವೈದ್ಯರು, ಸಿಬ್ಬಂದಿ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಶಾಸಕರಾದ ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ರೂಪಾ ಶಶಿಧರ್ ಪ್ರಸ್ತಾಪ ಮಾಡಿದರು. ಇದಕ್ಕೂ ಸ್ಪಂದಿಸಿದ ಡಿಸಿಎಂ, ವೈದ್ಯರು ಹಾಗೂ ಸಿಬ್ಬಂದಿ ಬಳಸುವ ಪಿಪಿಎ ಕಿಟ್, ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಸೇರಿ ಯಾವ ವಸ್ತುವಿಗೂ ಕೊರತೆ ಆಗಬಾರದು. ಅವೆಲ್ಲವನ್ನು ಎಷ್ಟು ಬೇಕಾದರೂ ಪೂರೈಸಲು ಸರ್ಕಾರ ಸಿದ್ದವಿದೆ. ಒಂದು ವೇಳೆ ಕೊರತೆ ಬಿದ್ದರೆ ಜಿಲ್ಲಾಧಿಕಾರಿಗೆ ಖರೀದಿ ಮಾಡಲು ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯ ಆರಂಭಕ್ಕೆ ಮುನ್ನ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಎಲ್ಲ ಕ್ರಮಗಳ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ದಿನಕ್ಕೆ 6,000 ಕೆಎಲ್ ಆಮ್ಲಜನಕ ಬಳಕೆಯಾಗುತ್ತಿದ್ದು, ಇನ್ನೂ 10,000 ಕೆಎಲ್ ಆಮ್ಲಜನಕ ಬೇಕಿದೆ. ಜಿಲ್ಲಾಸ್ಪತ್ರೆಯಲ್ಲಿ ದಿನಕ್ಕೆ 10,000 ಕೆಎಲ್ ಆಕ್ಸಿಜನ್ ಪೂರೈಸುವ ಕಾಮಗಾರಿ ನಡೆಯುತ್ತಿದೆ. ಇನ್ನೆರಡು ದಿನದಲ್ಲಿ ಆ ಕೆಲಸ ಮುಗಿಯುತ್ತದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಲಸಿಕೆಗೆ ಬಹಳ ಡಿಮಾಂಡ್ ಇದ್ದು, ಸೋಮವಾರದ ಹೊತ್ತಿಗೆ ನಮ್ಮಲ್ಲಿದ್ದ ಲಸಿಕೆಯ ಸ್ಟಾಕ್ ಖಾಲಿಯಾಯಿತು. ಹೊರಗಡೆಯಿಂದ 10,000 ವೈಲ್ ತರಿಸಲಾಗಿದೆ. ದಿನಕ್ಕೆ 11ರಿಂದ 12,000 ವೈಲ್‌ಗಳಷ್ಟು ಲಸಿಕೆ ಜಿಲ್ಲೆಗೆ ಬೇಕಿವೆ ಎಂಬ ಅಂಶವನ್ನು ಡಿಸಿಎಂ ಅವರ ಗಮನಕ್ಕೆ ತಂದರು. ಇದಕ್ಕೂ ಕೂಡಲೇ ಸ್ಪಂದಿಸಿದ ಡಿಸಿಎಂ ಅಶ್ವತ್ಥನಾರಾಯಣ, ಕೊರತೆ ಇರುವ ಆಮ್ಲಜನಕವನ್ನು ತಕ್ಷಣವೇ ಒದಗಿಸಲಾಗುವುದು ಹಾಗೂ ಅಗತ್ಯ ಪ್ರಮಾಣ ಲಸಿಕೆಯನ್ನೂ ನೀಡಲಾಗುವುದು ಎಂದರು.