ಬೆಂಗಳೂರು: ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿ ದತ್ತ ಪೀಠದಲ್ಲಿ ಮುಜಾವರ್ ಮಾತ್ರ ಪೂಜಾ ಕೈಂಕರ್ಯವನ್ನು ನೆರವೇರಿಸಲು ಅನುಮತಿ ನೀಡಿದ್ದ ಸರ್ಕಾರದ ನಿರ್ಧಾರವನ್ನು ರದ್ದು ಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ. ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸೈಯದ್ ಗೌಸ್ ಮೊಯ್ಯಿದ್ದೀನ್ ಶಾ ಖಾದ್ರಿ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ವಿಜಯ್‌ಕುಮಾರ್ ಎ.ಪಾಟೀಲ್ ಅವರಿದ್ದ ಪೀಠ ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿದೆ. ಅಲ್ಲದೆ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು? ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ 2018ರಲ್ಲಿ ಅಂದಿನ ರಾಜ್ಯ ಸರ್ಕಾರ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಗುರು ದತ್ತಾತ್ರೆಯ ಪೀಠ ಸಂವರ್ಧನಾ ಸಮಿತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ ಸರ್ಕಾರದ ಆದೇಶವನ್ನು ರದ್ದು ಪಡಿಸಿತ್ತು. ಅಲ್ಲದೇ, ಪ್ರಕರಣವನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು. ಹಾಗೆಯೇ, ಪ್ರಕರಣದ ಕುರಿತು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿಯನ್ನು ಗಣನೆಗೆ ತೆಗೆದುಕೊಳ್ಳದೇ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು 2021ರ ಸೆ.28 ರಂದು ನಿರ್ದೇಶಿಸಿತ್ತು. ಜೊತೆಗೆ ಸರ್ಕಾರ ದತ್ತಪೀಠದಲ್ಲಿ ಪೂಜಾಕೈಂಕರ್ಯ ನಡೆಸುವುದಕ್ಕೆ ಮುಜಾವರ್ ಅವರನ್ನು ನೇಮಕ ಮಾಡಿರುವುದು ಸಂವಿಧಾನದ ಪರಿಚ್ಚೇಧ 25ನೇ ವಿಧಿಯಲ್ಲಿ ಲಭ್ಯವಿರುವ ಎರಡೂ ಸಮುದಾಯಗಳ ಧಾಮಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬುದಾಗಿ ತಿಳಿಸಿತ್ತು.
ಈ ತೀರ್ಪು ಪ್ರಶ್ನಿಸಿ ಗೌಸ್ ಮೊಹಿದ್ದೀನ್ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯು 2022ರ ಆ.22ರಂದು ವಿಚಾರಣೆಗೆ ಬಂದ ವೇಳೆ, ದತ್ತಾತ್ರೇಯ ಪೀಠದಲ್ಲಿ ಇಸ್ಲಾಂ ಮತ್ತು ಹಿಂದೂ ಸಂಪ್ರದಾಯಗಳದಂತೆ ಪೂಜಾ ವಿಧಿ ವಿಧಾನ ನೆರವೇರಿಸುವುದಕ್ಕೆ ಅವಕಾಶ ಕಲ್ಪಿಸಲು 2022ರ ಜು.1ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ದತ್ತಾತ್ರೇಯ ಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ಮತ್ತು ಅರ್ಚಕರನ್ನು ನೇಮಿಸಲು 2022ರ ಜು.19ರಂದು ಆದೇಶಿಸಲಾಗಿದೆ. ಹಾಗೆಯೇ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಆ.17ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿತ್ತು.
ಡಿಸೆಂಬರ್ ತಿಂಗಳಲ್ಲಿ ದತ್ತಾತ್ರೇಯ ಜಯಂತಿಗೆ ಅವಕಾಶ ನೀಡಿದ್ದ ಹೈಕೋರ್ಟ್: ಡಿಸೆಂಬರ್ 6, 7 ಮತ್ತು 8 ರಂದು ದತ್ತಾತ್ರೇಯ ಜಯಂತಿ ನಡೆಸಲು ಉದ್ದೇಶಿಸಲಾಗಿದೆ. ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನದ ಉಸ್ತುವಾರಿ ವಹಿಸಲು ರಚಿಸಿರುವ ವ್ಯವಸ್ಥಾಪನಾ ಸಮಿತಿಯು ದತ್ತಾತ್ರೇಯ ಜಯಂತಿ ಆಚರಣೆಗೆ ಎಲ್ಲ ಸಿದ್ಧತೆ ನಡೆಸಿದೆ. ಅಲ್ಲದೆ, ಇಸ್ಲಾಂ ಮತ್ತು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ದತ್ತಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಸಮಿತಿಯಿಂದ ಅರ್ಚಕ ಹಾಗೂ ಮುಜಾವರ್ ಅವರನ್ನು ನೇಮಿಸಲಾಗಿದೆ. ಪ್ರತಿದಿನ ಈ ಎರಡೂ ಸಮುದಾಯದವರಿಂದ ದತ್ತ ಪಾದುಕೆಗೆ ಪೂಜೆ ನಡೆಯುತ್ತಿದೆ. ಆದ್ದರಿಂದ ದತ್ತಾತ್ರೇಯ ಜಯಂತಿ ಆಚರಣೆಗೆ ಅನುಮತಿ ನೀಡಬೇಕು ಎಂದು ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಈ ಅಂಶದ ಆಧಾರದಲ್ಲಿ ನ್ಯಾಯಪೀಠ, ದತ್ತಾತ್ರೇಯ ಜಯಂತಿ ಆಚರಣೆಗೆ ಅನುಮತಿ ನೀಡಿತ್ತು.
ಇದನ್ನೂ ಓದಿ: ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ.. ಮುಡಿ ಕೊಟ್ಟು ಹರಕೆ ತೀರಿಸಿದ ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ