ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಭಯದ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಕೊರೊನಾ ಹಾವಳಿ ತಡೆಗಟ್ಟಲು ರಾಜ್ಯ ಸರ್ಕಾರ ಇಂದಿನಿಂದ ರಾತ್ರಿ 8 ರಿಂದ ಮುಂಜಾನೆ 5 ಗಂಟೆವರೆಗೆ ಕರ್ಫ್ಯೂ ಜಾರಿ ಮಾಡಿದ್ದು, ಭದ್ರತೆಗೆ ಪೊಲೀಸರ ಕೊರತೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೂರಕ್ಕೂ ಹೆಚ್ಚು ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಸದ್ಯಕ್ಕೆ ಶೇ 40 ರಷ್ಟು ಪೊಲೀಸರು ಕೆಲಸಕ್ಕೆ ಹಾಜರಾಗದೇ ಇದ್ದು, ಸೋಂಕಿತರ ಸಂಪರ್ಕದಲ್ಲಿರುವವರನ್ನ ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಈಗಾಗಲೇ 16ಕ್ಕೂ ಹೆಚ್ಚು ಪೊಲೀಸ್ ಠಾಣೆಗಳು ಸೀಲ್ಡೌನ್ ಆಗಿದ್ದು, ಹಗಲಿನಲ್ಲಿ ಕಂಟೇನ್ಮೆಂಟ್ ಝೋನ್ ಗಳತ್ತ ಅಗತ್ಯವಿದ್ದರೆ ಮಾತ್ರ ಪೊಲೀಸರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ರಾತ್ರಿ ಭದ್ರತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಮಾತ್ರ ಪೊಲೀಸರನ್ನು ನಿಯೋಜಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ, ಸಿಟಿಯ ಎಲ್ಲೆಲ್ಲಿ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂಬ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.