ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ ಟಿ ರವಿ ಅವರನ್ನು ಬಿಡುಗಡೆ ಮಾಡಲಾಗಿದೆ. ಆ ಮೂಲಕ ಸಿ ಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರಾ? ಎಂಬ ಅನುಮಾನ ಬಲವಾಗಿದೆ. ಸಿ ಟಿ ರವಿ ಅವರನ್ನು 2020 ರಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಇದೀಗ ಹೈಕಮಾಂಡ್ ಇಂದು ರಿಲೀಸ್ ಮಾಡಿರುವ ಪದಾಧಿಕಾರಗಳ ಪಟ್ಟಿಯಲ್ಲಿ ಸಿ ಟಿ ರವಿ ಅವರನ್ನು ಕೈಬಿಡಲಾಗಿದೆ.
ಬಿಜೆಪಿಯಲ್ಲಿ ಎರಡು ಹುದ್ದೆ ಅಲಂಕರಿಸುವ ಹಾಗಿಲ್ಲ ಎಂಬ ಕಾನೂನಿದೆ. ಹಾಗಾಗಿಯೇ 2020ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಅಂದಿನ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟಕ್ಕೆ ಸಿ ಟಿ ರವಿ ರಾಜೀನಾಮೆ ನೀಡಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ವೇಳೆ ಇವರಿಗೆ ಗೋವಾ, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳ ಉಸ್ತುವಾರಿಯನ್ನೂ ನೀಡಲಾಗಿತ್ತು. ಜೊತೆಗೆ ಪುದುಚೇರಿ ಮತ್ತು ಲಕ್ಷದ್ವೀಪಗಳ ಸಂಘಟನಾ ಜವಾಬ್ದಾರಿ ಕೂಡ ವಹಿಸಲಾಗಿತ್ತು. ಇನ್ನು ಗೋವಾ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದಿತ್ತು. ಆಗ ಕೈ ಶಾಸಕರನ್ನು ಸೆಳೆಯುವಲ್ಲಿ ಸಿ ಟಿ ರವಿ ಕಾರ್ಯತಂತ್ರ ರೂಪಿಸಿದ್ದರು. ಹಾಗೆಯೇ ತಮಿಳುನಾಡಿನ ಉಸ್ತವಾರಿ ವಹಿಸಿ ಪಕ್ಷ ಸಂಘಟನೆಯ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಎಐಎಡಿಎಂಕೆ ಜೊತೆ ಮೈತ್ರಿ ರಾಜಕೀಯ, ತಮಿಳುನಾಡಿನಲ್ಲಿ ಪಕ್ಷ ಸಂಘಟನೆಯ ರೂಪುರೇಷೆ ಹೆಣೆಯುತ್ತಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈರನ್ನು ನೇಮಿಸುವಲ್ಲಿ ಸಿ ಟಿ ರವಿ ಪ್ರಮುಖ ಪಾತ್ರ ವಹಿಸಿದ್ದರು. ಮಹಾರಾಷ್ಟ್ರದಲ್ಲೂ ಕೂಡ ಉಸ್ತುವಾರಿ ವಹಿಸಿ ಕಾರ್ಯತಂತ್ರ ರೂಪಿಸಿದ್ದರು.
ಲೋಕಸಭೆ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿ ಟಿ ರವಿಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಿ, ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ನೀಡುವ ಇರಾದೆ ಪಕ್ಷದ ವರಿಷ್ಠರದ್ದು ಎಂಬ ಮಾತುಗಳು ಇದೀಗ ಬಲವಾಗಿ ಕೇಳಿ ಬಂದಿದೆ. ಜೊತೆಗೆ ಇತ್ತೀಚೆಗೆ ಸಿ ಟಿ ರವಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.
ಇದೀಗ ಈ ಬೆಳವಣಿಗೆ ಈ ಸುದ್ದಿಗೆ ಇನ್ನಷ್ಟು ಇಂಬು ನೀಡಿದೆ. ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾಲಾವಧಿ ಮುಗಿದಿದ್ದು, ಆ ಸ್ಥಾನಕ್ಕೆ ಬಿಜೆಪಿ ಪಾಳಯದಲ್ಲಿ ಸಾಕಷ್ಟು ಲಾಬಿ ನಡೆಯುತ್ತಿದೆ. ಇತ್ತ ವಿಪಕ್ಷ ನಾಯಕನನ್ನೂ ನೇಮಿಸದೇ ಇರುವುದು ಸಾಕಷ್ಟು ಅಚ್ಚರಿ ಹಾಗೂ ಟೀಕೆಗೆ ಕಾರಣವಾಗಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ನೇಮಕಕ್ಕೆ ಕಾಲ ಸನ್ನಿಹಿತವಾಗಿದೆಯಾ ಎಂಬ ಪ್ರಶ್ನೆ ಮೂಡಿದೆ.
ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ರಿಲೀಸ್: ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಇಂದು ಬಿಜೆಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿಯಿಂದ ಸಿ ಟಿ ರವಿ ಅವರನ್ನು ಕೈ ಬಿಡಲಾಗಿದೆ. ಇನ್ನು ಬಿ ಎಲ್ ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ. ಜೊತೆಗೆ ತೆಲಂಗಾಣ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್, ರಾಜ್ಯಸಭಾ ಸಂಸದ ರಾಧಾ ಮೋಹನ್ ಅಗರವಾಲ್, ಸಂಸದರಾದ ಅರುಣ್ ಸಿಂಗ್ ಸೇರಿ ಎಂಟು ಜನ ನಾಯಕರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಛತ್ತೀಸ್ಘಡದ ಮಾಜಿ ಸಿಎಂ ರಮಣ್ ಸಿಂಗ್, ವಿಧಾನ ಪರಿಷತ್ ಸದಸ್ಯ ತಾರಿಕ್ ಮನ್ಸೂರ್ ಸೇರಿದಂತೆ 13 ನಾಯಕರು ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಹಾಗೆಯೇ ಎ ಕೆ ಆಂಟೋನಿ ಪುತ್ರ ಅನಿಲ್ ಆಂಟೋನಿ ಸೇರಿ 13 ನಾಯಕರು ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿರುವ ಎನ್ಸಿಪಿ ನಾಯಕ ಶರದ್ ಪವಾರ್ : ಇಂಡಿಯಾ ಒಕ್ಕೂಟ ಅಸಮಾಧಾನ