ಬೆಂಗಳೂರು : ರಾತ್ರಿ ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದವರನ್ನ ಅಡ್ಡಗಟ್ಟಿ ಓರ್ವನನ್ನ ಹತ್ಯೆ ಮಾಡಿ, ಮತ್ತೊಬ್ಬನ ಮೇಲೆ ಹಲ್ಲೆ ಮಾಡಿರುವ ಘಟನೆ ಜೂನ್ 14ರ ರಾತ್ರಿ ರಾಮಮೂರ್ತಿ ನಗರದ ವಿಜಿನಾಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವಕನನ್ನು 22 ವರ್ಷದ ಇರದ್ರಾಜ್ ಎಂದು ಗುರುತಿಸಲಾಗಿದ್ದು, ಹಲ್ಲೆಗೊಳಗಾದ ಯುವಕನನ್ನು 27 ವರ್ಷದ ವಿಜಯ್ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: ಇರದ್ರಾಜ್ ಮತ್ತು ವಿಜಯ್ ಇಬ್ಬರು ಸಂಬಂಧಿಗಳು. ಇಬ್ಬರು ರಾಮಮೂರ್ತಿ ನಗರದಲ್ಲಿ ವಾಸಿಸುತ್ತಿದ್ದು, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಿತ್ಯ ಕೆಲಸ ಮುಗಿದ ಬಳಿಕ ಇಬ್ಬರು ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು. ಜೂನ್ 14ರ ರಾತ್ರಿ ಸಹ ಇರದ್ರಾಜ್ ಮತ್ತು ವಿಜಯ್ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು.
ಇನ್ನು ವಿಜಿನಾಪುರ ಬಳಿ ರಾಜೇಶ್ ಎಂಬಾತ ತನ್ನ ಸಹಚರರೊಂದಿಗೆ ಇರದ್ರಾಜ್ ಮತ್ತು ವಿಜಯ್ ತೆರಳುತ್ತಿದ್ದ ಬೈಕ್ನನ್ನು ಅಡ್ಡಗಟ್ಟಿದ್ದಾರೆ. ಬಳಿಕ ರಾಜೇಶ್ ‘ಯಾರು ನೀವು, ಈ ಸಮಯದಲ್ಲಿ ನಮ್ಮ ಏರಿಯಾಗೆ ಏಕೆ ಬಂದಿದ್ದಿರಾ?’ ಎಂದು ಇರದ್ರಾಜ್ಗೆ ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಇರದ್ರಾಜ್ ‘ಅದನ್ನೆಲ್ಲ ಕೇಳಲು ನೀವು ಯಾರು.. ನಾವು ನಮ್ಮ ಮನೆಗೆ ಹೋಗ್ತಿದ್ದೇವೆ. ದಾರಿ ಬಿಡಿ’ ಎಂದು ಉತ್ತರಿಸಿದ್ದಾನೆ.
ಇದರಿಂದ ಕೋಪಗೊಂಡ ರಾಜೇಶ್, 'ನಮ್ಮನ್ನೆ ಯಾರು ಎಂದು ಕೇಳ್ತಿಯಾ?’ ಎಂದು ಮಚ್ಚಿನಿಂದ ಇರದ್ರಾಜ್ ತಲೆಗೆ ಬೀಸಿದ್ದಾನೆ. ನಂತರ ವಿಜಯ್ ತನ್ನ ಪರಿಚಯ ಹೇಳಿಕೊಂಡಾಗ ಆತನಿಗೂ ಒಂದು ಏಟು ಹೊಡೆದು ಕಳಿಸಿದ್ದನು. ನಂತರ ಇರದ್ರಾಜ್ ಹಾಗೂ ವಿಜಯ್ ಇಬ್ಬರು ಮನೆಗೆ ಹೋಗಿ ಗಾಯಕ್ಕೆ ಮನೆಯಲ್ಲಿದ್ದ ಔಷಧ ಹಚ್ಚಿಕೊಂಡು ಮಲಗಿದ್ದರು. ಆದರೆ, ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಇರದ್ರಾಜ್ ಮೃತಪಟ್ಟಿರುವುದು ವಿಜಯ್ ಗಮನಕ್ಕೆ ಬಂದಿದೆ. ಕೂಡಲೇ ವಿಜಯ್ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಆರೋಪಿ ರಾಜೇಶ್ ಮೇಲೆ ವಿಜಯ್ ದೂರು ನೀಡಿದ್ದರಿಂದ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಈ ಘಟನೆ ಕುರಿತು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ನಾಲ್ಕು ದಿನಗಳಲ್ಲಿ ನಾಲ್ಕನೇ ಕೊಲೆ: ಇತ್ತೀಚೆಗೆ ಬೆಂಗಳೂರಿನಲ್ಲಿ ಕೊಲೆ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಕಳೆದ ನಾಲ್ಕು ದಿನಗಳಲ್ಲಿ ಇದು ನಾಲ್ಕನೇ ಕೊಲೆಯಾಗಿದೆ. ಜೂನ್ 15ರಂದು ಮಲಗಿದ್ದ ತಂದೆ ಮೇಲೆ ಕಲ್ಲು ಎತ್ತಿ ಹಾಕಿ ಮಗ ಕೊಲೆ ಮಾಡಿದ್ದನು. ಜೂನ್ 13ರಂದು ಕ್ಷುಲ್ಲಕ ಕಾರಣಕ್ಕೆ ಶುರುವಾದ ಸಹೋದರರ ನಡುವಿನ ಕಾಳಗ ಕೊಲೆಯಲ್ಲಿ ಅಂತ್ಯ ಕಂಡಿತ್ತು. ಜೂನ್ 11ರಂದು ಆಟೋ ಚಾಲಕನ ಹಗಲು ರೌಡಿಸಂಗೆ ಅಮಾಯಕ ಸಹೋದರರ ಪೈಕಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಯಶವಂತಪುರದ ಸೋಫ್ ಫ್ಯಾಕ್ಟರಿ ಬಳಿ ನಡೆದಿತ್ತು. ಹೀಗೆ ಈ ವಾರದಲ್ಲಿ ಈ ಕೊಲೆ ಸೇರಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ.
ಓದಿ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಹೆಡ್ ಕಾನ್ಸ್ಟೇಬಲ್ ಸಾವು - ಕೊಲೆ ಶಂಕೆ